Advertisement

ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಹೂರ್ತ ಫಿಕ್ಸ್‌

06:00 AM Jul 29, 2018 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ಪ್ರತಿಪಕ್ಷ ಬಿಜೆಪಿ ಮಹೂರ್ತ ನಿಗದಿಪಡಿಸಿದ್ದು ಆಗಸ್ಟ್‌ 9 ರಿಂದ ಮೂರು ತಂಡಗಳು ರಾಜ್ಯ ಪ್ರವಾಸ ಮಾಡಲಿವೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ತಂಡ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ  ಪ್ರವಾಸ ಮಾಡಲಿದೆ.

ಯಡಿಯೂರಪ್ಪ ಅವರ ತಂಡದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ವಿಧಾನಸಭೆ ಪ್ರತಿಪಕ್ಷದ  ಉಪ ನಾಯಕ ಗೋವಿಂದ ಕಾರಜೋಳ ಇರಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ  ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರನ್ನೊಳಗೊಂಡ ಎರಡನೆ ತಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ, ಮಾಜಿ ಸಚಿವ ಸಿ.ಟಿ.ರವಿ ಅವರನ್ನೊಳಗೊಂಡ ಮೂರನೇ ತಂಡ ರಾಜ್ಯದ ಇತರೆಡೆ ಪ್ರವಾಸ ಕೈಗೊಳ್ಳಲಿದೆ.

ನಗರದಲ್ಲಿ ಶನಿವಾರ ನಡೆದ ಕೋರ್‌ ಕಮಿಟಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಗಿದ್ದು, ಒಂದೆರಡು ದಿನಗಳಲ್ಲಿ  ಯಾವ ತಂಡ ಎಲ್ಲಿಂದ ಪ್ರವಾಸ ಪ್ರಾರಂಭಿಸಬೇಕು ಎಂಬ ಬಗ್ಗೆ ರೂಪು-ರೇಷೆ ನಿಗದಿಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ನಮ್ಮ ಹೋರಾಟ ಪ್ರಾರಂಭವಾಗಿದೆ. ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ಒಡೆದಾಳುವ ನೀತಿ ಹಾಗೂ ರಾಜ್ಯ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

Advertisement

ಬಿ.ವೈ.ವಿಜಯೇಂದ್ರ ಅವರು ರಾಜ್ಯ ಪ್ರವಾಸಕ್ಕೆ ನಿಮ್ಮ ಜತೆಗೂಡುತ್ತಾರಾ ಎಂಬ ಪ್ರಶ್ನೆಗೆ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾರೆ. ಎಲ್ಲೆಲ್ಲಿ ಕಾರ್ಯಕರ್ತರು ಅಪೇಕ್ಷೆ ಪಡುತ್ತಾರೋ ಅಲ್ಲಿಗೆ ಹೋಗುತ್ತಾರೆ.ಆದರೆ, ವಿಜಯೇಂದ್ರ ಚುನಾವಣೆಗೆ ಸ್ಪರ್ಧಿಸುವ ಯಾವುದೇ ವಿಚಾರ ಪಕ್ಷದ ಮುಂದೆ ಇಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಹಾರ, ಅನಿಲ ಭಾಗ್ಯ ಯೋಜನೆಗೆ ಸ್ಟೌವ್‌ ಖರೀದಿಯಲ್ಲಿ ಹಗರಣ, ವಿದ್ಯಾರ್ಥಿಗಳ ಪಠ್ಯಪುಸ್ತಕ, ಸಮವಸ್ತ್ರ ಖರೀದಿಯಲ್ಲಿ ಹಣ ದುರುಪಯೋಗ ಇವೆಲ್ಲವೂ  ಈ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ.  ಹೀಗಾಗಿಯೇ ವಿಧಾನಸೌಧಕ್ಕೆ ಪ್ರವೇಶ ನಿರ್ಬಂಧ ಹೇರಲು ಮುಂದಾಗಿದೆ. ಇವರು ಮಾಡುವ ಅನಾಚಾರ-ಅವ್ಯವಹಾರ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಮಾಧ್ಯಮದವರ ಸಹಿತ ಯಾರನ್ನೂ ಒಳಗೆ ಬಿಡದಂತೆ ನೋಡಿಕೊಳ್ಳಲು ಮುಂದಾಗಿದೆ. ಇದು ಅಕ್ಷಮ್ಯ ಅಪರಾಧ.
– ಬಿ.ಎಸ್‌.ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next