Advertisement

ಆನ್‌ ಲೈನ್‌ ನೋಂದಣಿ ಎಡವಟ್ಟು

02:10 AM Nov 20, 2018 | Team Udayavani |

ಬೆಳ್ತಂಗಡಿ: ಪ್ರತಿಯೊಂದು ಕುಟುಂಬವು ಸ್ವಂತ ಸೂರು ಹೊಂದಬೇಕು ಎಂಬ ಹಿನ್ನೆಲೆಯಲ್ಲಿ ಸರಕಾರವು ರಾಜೀವ ಗಾಂಧಿ ವಸತಿ ನಿಗಮದ ಮೂಲಕ ವಿವಿಧ ವಸತಿ ಯೋಜನೆಗಳಿಂದ ವಸತಿ ಭಾಗ್ಯ ಕಲ್ಪಿಸುತ್ತಿದ್ದು, ಆನ್‌ಲೈನ್‌ ನೋಂದಣಿಯ ಎಡವಟ್ಟು ಮನೆ ಮಂಜೂರಾದರೂ ಮಂಜೂರಾತಿ ಪತ್ರ ಹಾಗೂ ಅನುದಾನ ಬಾರದೇ ಇರುವ ಸ್ಥಿತಿ ನಿರ್ಮಾಣವಾಗಿದೆ. ವಸತಿ ಯೋಜನೆಯಲ್ಲಿ ಪಾರದರ್ಶಕತೆಯನ್ನು ತರುವ ಹಿನ್ನೆಲೆಯಲ್ಲಿ ಮಂಜೂರಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ಗೊಳಿಸಲಾಗಿದ್ದು, ಇದೀಗ ಫಲಾನುಭವಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಗ್ರಾ.ಪಂ.ಗಳು ಫಲಾನುಭವಿಗೆ ಮನೆ ನೀಡಿದರೂ ಆನ್‌ಲೈನ್‌ ಪ್ರಕ್ರಿಯೆಯಲ್ಲಿನ ಎಡವಟ್ಟಿನಿಂದ ಮಂಜೂರಾತಿ ಪ್ರಕ್ರಿಯೆ ಗೊಂದಲದಲ್ಲಿದೆ.

Advertisement

ಮ್ಯಾಚ್‌ ಸ್ಕೋರ್‌ 50 ಶೇ.
ಫಲಾನುಭವಿಗಳಿಗೆ ವಸತಿ ಮಂಜೂರಾದ ತತ್‌ಕ್ಷಣ ಪ್ರಾರಂಭದಲ್ಲಿ ಕುಟುಂಬದ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡನ್ನು ಲಿಂಕ್‌ ಮಾಡಿಕೊಂಡು ನೋಂದಣಿ ಕಾರ್ಯ ನಡೆಸಬೇಕಾಗುತ್ತದೆ. ಈ ಸಂದರ್ಭ ಫಲಾನುಭವಿಗಳ ಕುಟುಂಬದ ಸದಸ್ಯರ ಹೆಸರಿನ ಮುಂದೆ ‘ಮ್ಯಾಚ್‌ ಸ್ಕೋರ್‌’ ಎಂಬ ಪಟ್ಟಿ ಇರುತ್ತದೆ. ಆ ಪಟ್ಟಿಯಲ್ಲಿ ಪ್ರತಿಯೊಬ್ಬರ ನೋಂದಣಿಯೂ 50 ಶೇ.ಕ್ಕಿಂತ ಕಡಿಮೆ ಇದ್ದರೆ ನೋಂದಣಿ ಪ್ರಕ್ರಿಯೆ ಮುಂದುವರಿಯುವುದೇ ಇಲ್ಲ. ಉದಾಹರಣೆಗೆ ಕುಟುಂಬದ ಒಬ್ಬ ಸದಸ್ಯನ ಆಧಾರ್‌ ಹಾಗೂ ರೇಷನ್‌ ಕಾರ್ಡ್‌ನಲ್ಲಿ ಆತನ ಹೆಸರಿನ ಅಕ್ಷರಗಳಲ್ಲಿ ಸ್ವಲ್ಪ ಬದಲಾವಣೆ ಇದ್ದರೂ, ‘ಮ್ಯಾಚ್‌ ಸ್ಕೋರ್‌’ 50 ಶೇ.ವನ್ನು ತಲುಪುವುದೇ ಇಲ್ಲ. ಹೀಗಿರುವಾಗ ಅವರ ನೋಂದಣಿ ಪ್ರಕ್ರಿಯೆ ಅರ್ಧದಲ್ಲಿಯೇ ಮೊಟಕುಗೊಳ್ಳುತ್ತಿದೆ.

ಫಲಾನುಭವಿಗಳ ಎಡವಟ್ಟು?
ವಸತಿ ಯೋಜನೆಗಳಿಗೆ ಸರಕಾರವು ಅನುದಾನ ನೀಡುವ ಸಂದರ್ಭ ಹಂತ ಹಂತವಾಗಿ ಹಣ ಬಿಡುಗಡೆಗೊಳಿಸುತ್ತಿದ್ದು, ಫಲಾನುಭವಿಗಳ ಎಡವಟ್ಟು ಕೂಡ ಅನುದಾನಕ್ಕೆ ಅಡ್ಡಿಯಾಗಿದೆ. ತಳಪಾಯ, ಗೋಡೆ, ಮೇಲ್ಛಾವಣಿ ಹಾಗೂ ಶೌಚಾಲಯ ನಿರ್ಮಾಣದ ಬಳಿಕ ಅಂತಿಮವಾಗಿ ಹಣ ಬಿಡುಗಡೆಯಾಗುತ್ತದೆ. ಫಲಾನುಭವಿಗಳು ಆರಂಭದ ಎರಡು ಹಂತಗಳಲ್ಲಿ ಸಮರ್ಪಕವಾಗಿ ಹಣ ಪಡೆದಿರುತ್ತಾರೆ. ಆದರೆ ಮನೆಗೆ ಮೇಲ್ಛಾವಣಿಯನ್ನು ನಿರ್ಮಿಸುವ ಸಂದರ್ಭ ಒಂದು ಅಥವಾ ಎರಡು ಕೋಣೆಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳುತ್ತಾರೆ. ಅದನ್ನು ಜಿಪಿಎಸ್‌ಗೆ ಅಪ್‌ಲೋಡ್‌ ಮಾಡಿದಾಗ ಮನೆಯ ಹಿಂದಿನ ಗಾತ್ರ ಹಾಗೂ ಈಗಿನ ಗಾತ್ರಕ್ಕೂ ವ್ಯತ್ಯಾಸ ಕಂಡುಬಂದು, ಅನುದಾನ ಪಡೆಯುವುದಕ್ಕೆ ತೊಂದರೆಯಾಗುತ್ತದೆ.

ಗುರಿ ಮುಟ್ಟಲು ಅಡಚಣೆ
ನಿಗಮದ ಮೂಲಕ ವಿವಿಧ ಯೋಜನೆಗಳ ಮನೆ ನೀಡುವ ವೇಳೆ ಬಸವ ವಸತಿ ಯೋಜನೆಯಲ್ಲಿ ಹೆಚ್ಚಿನ ಮನೆಗಳನ್ನು ನೀಡುತ್ತದೆ. ತಾಲೂಕಿನಲ್ಲಿ ಬಸವ ವಸತಿ ಯೋಜನೆಗೆ ಈ ಸಾಲಿನಲ್ಲಿ 2,537 ಗುರಿ ನೀಡಿ, 2,348 ಫಲಾನು ಭವಿಗಳನ್ನು ಆಯ್ಕೆ ಮಾಡಲಾಗಿದೆ. ಅಂಬೇಡ್ಕರ್‌ ವಸತಿ ಯೋಜನೆಯಲ್ಲಿ 480ರ ಗುರಿ ನೀಡಿದರೂ, ಪ್ರಸ್ತುತ ಅಲ್ಲಿ ಅನುದಾನವಿಲ್ಲದೆ ತೊಂದರೆಯಾಗಿದೆ.

ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯ ಸಮೀಕ್ಷೆಯ ಪ್ರಕಾರ ತಾಲೂಕಿನಲ್ಲಿ 8,643 ಕುಟುಂಬಗಳನ್ನು ವಸತಿ/ನಿವೇಶನ ರಹಿತರು ಎಂದು ಗುರುತಿಸಲಾಗಿದೆ. ಅರ್ಜಿ ಸ್ವೀಕಾರ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಎಲ್ಲ ಯೋಜನೆಯಲ್ಲಿ ತಾಲೂಕಿಗೆ ವರ್ಷದಲ್ಲಿ 1,502 ಮನೆಗಳ ಗುರಿಯಿದ್ದು, ಪ್ರಸ್ತುತ 54.59 ಶೇ.ಪ್ರಗತಿ ಸಾಧಿಸಲಾಗಿದೆ. ಆದರೆ ತಾಂತ್ರಿಕ ದೋಷಗಳು ಗುರಿಮುಟ್ಟುವುದಕ್ಕೆ ಅಡಚಣೆಯನ್ನು ತಂದಿವೆ.

Advertisement

ಹೊಂದಾಣಿಕೆ ಅಗತ್ಯ
ವಸತಿ ನಿರ್ಮಾಣಕ್ಕಾಗಿ ಸರಕಾರ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತದೆ. ಜತೆಗೆ ಅದನ್ನು ಸಮತಟ್ಟು ಮಾಡುವುದಕ್ಕೆ 3 ಸಾವಿರ ರೂ.ಗಳ ಅನುದಾನ ಲಭಿಸುತ್ತದೆ. ಇಲ್ಲಿ ಎಲ್ಲೋ ಒಂದು ಗುಡ್ಡಗಾಡು ಪ್ರದೇಶದಲ್ಲಿ ನಿವೇಶನ ಲಭಿಸಿದರೆ ಅದನ್ನು 3 ಸಾವಿರ ರೂ.ಗಳಲ್ಲಿ ಸಮತಟ್ಟು ಮಾಡುವುದು ಅಸಾಧ್ಯದ ಮಾತು. ಹೀಗಾಗಿ ನಿವೇಶನದ ವಿಚಾರದಲ್ಲಿ ಕಂದಾಯ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಆಗ್ರಹಗಳು ಕೇಳಿಬರುತ್ತಿವೆ.

ದಾಖಲೆ ಸಮರ್ಪಕ ಅಗತ್ಯ
ನ. 5ರಿಂದ ಬಸವ ವಸತಿ ಯೋಜನೆಯಲ್ಲಿ ಬಾಕಿ ಉಳಿದಿದ್ದ ಅನುದಾನ ಬರುತ್ತಿದೆ. ಆದರೆ ಪ್ರಾರಂಭದ ನೋಂದಣಿಯ ಸಂದರ್ಭ ದಾಖಲೆಗಳನ್ನು ಪರಿಶೀಲಿಸುವ ಸಂದರ್ಭ ದಾಖಲೆ ಸರಿಯಿಲ್ಲದೇ ಇದ್ದರೆ ನೋಂದಣಿ ಪ್ರಕ್ರಿಯೆ ಮುಂದುವರಿಯುತ್ತಿಲ್ಲ. ಈ ಹಿಂದೆ ಮನೆ ಪಡೆದು ಮತ್ತೆ ಅದೇ ಫಲಾನುಭವಿಗೆ ಮನೆ ನೀಡಿದರೂ, ನೋಂದಣಿಯ ಸಂದರ್ಭ ತಿಳಿಯುತ್ತದೆ.
– ಕುಸುಮಾಧರ್‌ ಬಿ. ಕಾರ್ಯನಿರ್ವಹಣಾಧಿಕಾರಿ, ತಾ.ಪಂ.ಬೆಳ್ತಂಗಡಿ

— ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next