Advertisement

ಮಳೆ ಕಣ್ಣಾಮುಚ್ಚಾಲೆಗೆ ರೈತರು ಕಂಗಾಲು

09:36 PM Jul 08, 2019 | Team Udayavani |

ದೇವನಹಳ್ಳಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಆಶಾದಾಯಕವಾಗಿ ಬರುತ್ತದೆ ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಬಿತ್ತನೆ ಮಾಡುವ ಸಮಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.

Advertisement

ಜಿಲ್ಲೆಯಲ್ಲಿ ಇತ್ತೀಚಿಗೆ ಬಿದ್ದ ಮಳೆಯಿಂದ ರೈತಾಪಿ ಜನರು ಸಂತಸದಿಂದಲೇ ಬಿತ್ತನೆಗೆ ಸಜ್ಜುಗೊಂಡು ಒಂದೆರಡು ಬಾರಿ ಭೂಮಿಯನ್ನು ಹದ ಮಾಡಿಕೊಂಡಿದ್ದರು. ಆದರೆ, ಕಳೆದ ವಾರದಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಾಗಿದ್ದರೂ ಮಳೆಯ ದರ್ಶನವಿಲ್ಲ.

ಬಿತ್ತನೆ ಕಾರ್ಯಕ್ಕೆ ಸಜ್ಜಾಗಿರುವ ರೈತರು ಆಕಾಶದತ್ತ ಜಾತಕ ಪಕ್ಷಿಯಂತೆ ಎದುರು ನೋಡುವ ಪರಿಸ್ಥಿತಿ ಬಂದಿದೆ. ಈಗ ಮಳೆಯ ವಿಳಂಬದಿಂದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ಒಂದೆರಡು ಬಾರಿ ಸುರಿದ ಮಳೆ ಹೊರತು ಪಡಿಸಿದರೆ ಆಷಾಢ ಮಾಸದ ಗಾಳಿ ಜೊತೆಗೆ ಬಿಸಿಲಿನ ತಾಪ ಹಾಗೂ ಬೇಸಿಗೆ ನೆನಪಿಸುವಂತೆ ಆಗಿದೆ.

ವಿವಿಧ ಬೆಳೆ ಬಿತ್ತನೆ: ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಒಟ್ಟು ಬಿತ್ತನೆ ಗುರಿ ಖುಷ್ಕಿ ಮತ್ತು ನೀರಾವರಿ 60,403 ಹೆಕ್ಟೇರ್‌. ಈ ಪೈಕಿ ನೀರಾವರಿ 450 ಹೆಕ್ಟೇರ್‌ ಮತ್ತು ಖುಷ್ಕಿ 307 ಹೆಕ್ಟೇರ್‌ ಒಟ್ಟು 757 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 17,867 ಹೆಕ್ಟೇರ್‌ ಬಿತ್ತನೆಯಾಗಿ ಶೇ.33 ಇತ್ತು. ಪ್ರಸ್ತುತ ಶೇ.01ರಷ್ಟು ಮಾತ್ರ ಆಗಿದೆ. ರಾಗಿ 65 ಹೆಕ್ಟೇರ್‌, ಮುಸುಕಿನ ಜೋಳ 317 ಹೆಕ್ಟೇರ್‌, ಮೇವಿನ ಜೋಳ 178 ಹೆಕ್ಟೇರ್‌, ತೊಗರಿ 158 ಹೆಕ್ಟೇರ್‌, ಅ‌ಳಸಂದಿ 15 ಹೆಕ್ಟೇರ್‌, ಅವರೆ 10 ಹೆಕ್ಟೇರ್‌, ನೆಲಗಡಲೆ 12 ಹೆಕ್ಟೇರ್‌ ಬಿತ್ತನೆಯಾಗಿದೆ.

ತಾಲೂಕುವಾರು ಬಿತ್ತನೆ ಕಾರ್ಯ: ದೇವನಹಳ್ಳಿ 116, ಹೊಸಕೋಟೆ 132 ಹೆಕ್ಟೇರ್‌, ದೊಡ್ಡಬಳ್ಳಾಪುರ 444 ಹೆಕ್ಟೇರ್‌, ನೆಲಮಂಗಲ 115 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.

Advertisement

ಮಳೆಯ ವಿವರ: ಪ್ರಸ್ತುತ ಮುಂಗಾರಿನಲ್ಲಿ ಜೂಲೈ 05ರವರೆಗೆ ಸುರಿದ ಮಳೆಯ ಪ್ರಮಾಣ ದೇವನಹಳ್ಳಿ ವಾಡಿಕೆ ಮಳೆ 106 ಮಿ.ಮೀ ಪೈಕಿ 74 ಮಿ.ಮೀ , ಹೊಸಕೋಟೆ 109 ಮಿ.ಮೀ ಪೈಕಿ 67 ಮಿ.ಮೀ, ದೊಡ್ಡಬಳ್ಳಾಪುರ 140 ಮಿ.ಮೀ ಪೈಕಿ 66 ಮಿ.ಮೀ, ನೆಲಮಂಗಲ 130 ಮಿ.ಮೀ ಪೈಕಿ 83 ಮಿ.ಮೀ ಮಾತ್ರ ಸುರಿದಿದ್ದು, ಶೇಕಡ ವಾರು ಪ್ರಮಾಣದಲ್ಲಿ ಕೊರತೆಯಿದೆ.

ಕೆರೆಕುಂಟೆಗಳಲ್ಲಿ ನೀರಿಗೆ ಅಭಾವ: ಮೇ ಅಂತ್ಯ ಹಾಗೂ ಜೂನ್‌ ಪ್ರಾರಂಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾದರೂ ಬಿತ್ತನೆ ಕಾರ್ಯ ಚುರುಕು ಆಗುತ್ತಿದ್ದಂತೆ, ಮಳೆರಾಯ ಮೋಡದ ಮರೆಯಲ್ಲಿ ಸರಿದು ಮಳೆಯ ಕೊರತೆ ಉಂಟಾಯಿತು. ಈಗಾಗಲೇ ಬರದ ಛಾಯೆಯಲ್ಲಿ ಜಿಲ್ಲೆಯ ತಾಲೂಕುಗಳು ಇದ್ದು, ಕೆರೆ ಕುಂಟೆಗಳಲ್ಲಿ ನೀರು ಇಲ್ಲದಾಗಿದ್ದು, ನೀರಿಗೆ ಅಭಾವವಿದೆ.

ಈಗಲೂ ಕಾಡುತ್ತಿದೆ ಆತಂಕ: ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ಅಗತ್ಯ ಗೊಬ್ಬರ, ಲಘು ಪೌಷ್ಟಿಕಾಂಶ ಗೊಬ್ಬರ ಕೊರತೆ ಆಗದಂತೆ ದಾಸ್ತಾನು ಮಾಡಲಾಗಿದೆ. ಬೀಜ, ಗೊಬ್ಬರವನ್ನು ಸಿದ್ಧತೆ ಮಾಡಿಕೊಂಡು ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಪೈರು ಬೆಳೆದಿತ್ತು. ಪೈರು ಇನ್ನೇನು ತೆನೆ ಮೂಡುವ ಸಂದರ್ಭದಲ್ಲಿ ಮಳೆಯು ಕೈ ಕೊಟ್ಟಿತ್ತು. ಇದೇ ಆತಂಕ ಈಗಲೂ ಕಾಡುತ್ತಿದೆ ಎಂದು ರೈತರು ಹೇಳುತ್ತಾರೆ.

ಈ ವರ್ಷ ಪ್ರಾರಂಭದಲ್ಲಿ ಉತ್ತಮ ಮಳೆಯಾದರೂ ಬಿತ್ತನೆ ಕಾರ್ಯ ಮುಗಿದ ನಂತರ ಮಳೆ ಕೈಕೊಟ್ಟಿರುವುದು ತಾಲೂಕಿನ ರೈತರಲ್ಲಿ ಆತಂಕ ಮೂಡಿಸಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದೆ.
-ಎಚ್‌.ಎಂ. ರವಿಕುಮಾರ್‌, ಕೃಷಿಕ ಸಮಾಜದ ನಿರ್ದೇಶಕ

ಆಷಾಢ ಇರುವುದರಿಂದ ಗಾಳಿ ಇದೆ. ಗಾಳಿ ಕಡಿಮೆಯಾಗಿ ಮಳೆ ಬಂದರೆ ಮತ್ತೂಂದು ಬಾರಿ ಬಿತ್ತನೆ ಕಾರ್ಯಕ್ಕೆ ಮುಂದಾಗಬಹುದು. ಕಳೆದ 2 ವರ್ಷದಿಂದ ಮಳೆ ಕ್ಷೀಣಿಸುತ್ತಿದೆ. ಎಲ್ಲಿಯೂ ಮಳೆ ಇಲ್ಲವಾದರಿಂದ ಬಿತ್ತನೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.
-ನಾರಾಯಣಸ್ವಾಮಿ, ರೈತ

ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮುಂಜಾಗ್ರತ ಕ್ರಮವಾಗಿ ಬಿತ್ತನೆ ಬೀಜ, ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ.
-ಗಿರೀಶ್‌, ಜಂಟಿ ಕೃಷಿ ನಿರ್ದೇಶಕ

ಈಗಾಗಲೇ ಜಿಲ್ಲೆಯ 4 ತಾಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜವನ್ನು ರೈತರಿಗೆ ನೀಡುವ ಸಲುವಾಗಿ ಕಾಯ್ದಿರಿಸಲಾಗಿದೆ. ರಸಗೊಬ್ಬರದ ಕೊರತೆ ಇಲ್ಲದಂತೆ ಆದ್ಯತೆ ನೀಡಲಾಗಿದೆ.
-ಎಂ.ಸಿ. ವಿನುತಾ, ಉಪ ನಿರ್ದೇಶಕಿ, ಜಿಲ್ಲಾ ಕೃಷಿ ಇಲಾಖೆ

ರೈತರು ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಕೆಲವರು ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ಬಂದರೆ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ಜುನ್‌ನಲ್ಲಿ ಮಳೆ ಬರದಿದ್ದರೆ 3 ತಿಂಗಳ ಬೆಳೆಗಳಾದ ರಾಗಿ, ಹುರುಳಿ ಮಾತ್ರ ಬೆಳೆಯಬಹುದು.
-ಎಂ.ಎನ್‌. ಮಂಜುಳಾ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ

* ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next