Advertisement

ಭಾಗವತ ಪಾರಾಯಣ ತಂದ ಫಜೀತಿ!

06:15 PM Apr 17, 2021 | Team Udayavani |

ಆಳಂದ: ಗಡಿಭಾಗದ ಆಳಂಗಾ ಗ್ರಾಮದ ಬಡಾವಣೆಯೊಂದರಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂಭತ್ತು ದಿನಗಳ ಕಾಲದ ಭಾಗವತ ಪಾರಾಯಣಕ್ಕೆ ಆಗಮಿಸಿದ್ದ ಮಹಾರಾಷ್ಟ್ರದ 15ಕ್ಕೂ ಹೆಚ್ಚು ಜನರು ಒಂಭತ್ತು ದಿನಗಳ ಕಾಲ ತಂಗಿದ್ದರಿಂದ ಕೊರೊನಾ ಸೋಂಕು ಹರಡಿದ್ದು, ಸಹೋದರ ಸಂಬಂಧಿಗಳಿಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ ಗ್ರಾಮದ ಅನೇಕ ಜನರಿಗೆ ಕೊರೊನಾ ಸೋಂಕು ಹರಡಿದೆ.

Advertisement

ನಾಲ್ಕು ದಿನಗಳ ಹಿಂದೆ ಇದೇ ಬಡಾವಣೆಯ 65 ವರ್ಷದ ವಯೋವೃದ್ಧೆಯೊಬ್ಬರು ಕೊರೊನಾ ಸೋಂಕಿಗೆ ಮೃತಪಟ್ಟ ಬೆನ್ನಲ್ಲೇ ಗುರುವಾರ ಮಾಣಿಕರಾವ್‌ ಕುಲಕರ್ಣಿ (90) ಎನ್ನುವವರು ಬಲಿಯಾಗಿದ್ದಾರೆ. ಮಾಣಿಕರಾವ್‌ ಕುಲಕರ್ಣಿ ಅವರನ್ನು ಉಮರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸುಮಾರು 30 ಮಂದಿಗೆ ಸೋಂಕು ಆವರಿಸಿದ್ದು, ಅವರಿಗೆ ಆಸ್ಪತ್ರೆ, ಮನೆ ಹಾಗೂ ಐಸೋಲೇಷನದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಗ್ರಾಮದಲ್ಲಿ ಆರು ದಿನಗಳಿಂದ ಗ್ರಾಮ ಪಂಚಾಯಿತಿ ಆಡಳಿತ ಸೀಲ್‌ಡೌನ್‌ ಮಾಡಿದ್ದು, ಗ್ರಾಮದಲ್ಲಿ ತುರ್ತು ಚಿಕಿತ್ಸಾ ಘಟಕ ತೆರೆಯುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಅಂದಾಜಿನಂತೆ ಆಧಾರ ಕಾರ್ಡ್‌ ವಿಳಾಸದ ಆಧಾರದ ಮೇಲೆ ತಾಲೂಕಿನಲ್ಲಿ ಶುಕ್ರವಾರ ಹೊಸದಾಗಿ 45 ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ ಸೋಂಕು ಹರಡುವ ಭೀತಿಯಿದ್ದರೂ ಹೊರಗಿನವರನ್ನು ಗ್ರಾಮಕ್ಕೆ ಬಿಟ್ಟಿದ್ದೇ ಪ್ರಮಾದವಾಗಿದೆ. ಇದರಿಂದಾಗಿ ಇಡಿ ಗ್ರಾಮವೇ ಪರಿತಪಿಸುವಂತೆ ಆಗಿದೆ. ಈಗಾಗಲೇ ಮೂವರು ಮೃತಪಟ್ಟಿದ್ದಾರೆ. ಅನೇಕ ಗ್ರಾಮಸ್ಥರು ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಸೀಲ್‌ಡೌನ್‌ ವಿಧಿಸಿದ್ದರಿಂದ ಯಾರೂ ಮನೆಯಿಂದ ಹೊರಬರುತ್ತಿಲ್ಲ. ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಗ್ರಾಮದಲ್ಲಿ ತುರ್ತು ಆರೋಗ್ಯ ಚಿಕಿತ್ಸಾ ಘಟಕ ತೆರೆಯಬೇಕು. ಅಲ್ಲದೇ ಮನೆ, ಮನೆಗೆ ಬರುವ ಆರೋಗ್ಯ ಸಿಬ್ಬಂದಿಗೆ 15 ಹಳ್ಳಿಗಳನ್ನು ಹಂಚಲಾಗಿದೆ. ಅವರು ಮತ್ತೂಂದು ಊರಿಗೆ ಹೋಗಿ ಬರುವ ತನಕ ಸೂಕ್ಷ್ಮ ಪರಿಸ್ಥಿತಿ ಎದುರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೇಲಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಅಶೋಕ ಕಲಶೆಟ್ಟಿ , ಆಳಂಗ

ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಕೆಲವರು ಎಷ್ಟೇ ಹೇಳಿದರೂ ಮಾಸ್ಕ್ ಧರಿಸುತ್ತಿಲ್ಲ. ಆಳಂಗಾದ ಮನೆಯೊಂದರಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಬೀಗರು, ನೆಂಟರು ಲಾತೂರು, ಉಮ್ಮರಗಾದಿಂದ ಬಂದಿದ್ದರು. ಅವರಿಂದ ಸೋಂಕು ಹರಡಿರಬಹುದು. ಸುರಕ್ಷತಾ ಕ್ರಮಕ್ಕಾಗಿ ಗ್ರಾಪಂ ಸೀಲ್‌ಡೌನ್‌ ಕ್ರಮ ಕೈಗೊಂಡಿದೆ. ಆರೋಗ್ಯ ಸಿಬ್ಬಂದಿ ನಿತ್ಯ ಗ್ರಾಮಕ್ಕೆ ಭೇಟಿ ನೀಡಿ, ಶಂಕಿತರ ಮೂಗಿನ ದ್ರವ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಪಾಸಿಟಿವ್‌ ಬಂದವರು ನಮ್ಮಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. ನೇರವಾಗಿ ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಗ್ರಾಮಸ್ಥರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಇಲಾಖೆಗೆ ಸಂಪರ್ಕಿಸಬೇಕು.
ಡಾ| ಜಿ. ಅಭಯಕುಮಾರ,
ತಾಲೂಕು ಆರೋಗ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next