ಬೆಂಗಳೂರು: “ಬೆಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮಾಧ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಬಿ.ಕೆ. ರವಿ ಅವರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆ’ ದೊರೆಯಬೇಕಿತ್ತು, ಆದರೆ ಏಕೆ ಕೈತಪ್ಪಿತೋ ಗೊತ್ತಿಲ್ಲ. ಈ ಬಗ್ಗೆ ಹೆಚ್ಚಾಗಿ ಮಾತನಾಡಿದರೆ ಎಲ್ಲೆಲ್ಲೋ ಏಟು ಬೀಳುತ್ತವೆ. ಹಾಗಾಗಿ ನಾನು ಹೆಚ್ಚೇನೂ ಮಾತನಾಡಲ್ಲ..!”
-ಹೀಗಂತ ಹೇಳಿದ್ದು, ಆಡಳಿತಾರೂಢ ಕಾಂಗ್ರೆಸ್ಸಿನ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ. ಕರ್ನಾಟಕ ರಾಜ್ಯ ಕನಕ ಯುವ ಸೇನೆ ಮತ್ತು ಡಾ.ಬಿ.ಕೆ. ರವಿ ಅಭಿಮಾನಿಗಳ ಬಳಗದ ವತಿಯಿಂದ ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ವಿಟಿಯು ಸಿಂಡಿಕೇಟ್ ಸದಸ್ಯರಾದ ಪ್ರೊ.ಬಿ.ಕೆ. ರವಿ ಅವರಿಗೆ ಗೌರವಾರ್ಪಣೆ ಸಮಾರಂಭ’ದಲ್ಲಿ ರವಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ತನ್ನ ನೆಚ್ಚಿನ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿಸಬೇಕೆಂದು ರವಿ ಅವರು ಬಹಳಷ್ಟು ಶ್ರಮಿಸಿದರು. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ರವಿ ಅವರು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಬೇಕಿತ್ತು. ಆದರೆ, ಸಿದ್ದರಾಮಯ್ಯ ಅವರು ಏಕೆ ಆ ಹುದ್ದೆಯನ್ನು ರವಿಗೆ ನೀಡಲಿಲ್ಲ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ರವಿ ಅವರ ಶ್ರಮಕ್ಕೆ ಸರಿ ಯಾದ ಪ್ರತಿಫಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ವರ್ಗದ ಕಡು ಸೊತ್ತಾಗಿದ್ದ ಮಾಧ್ಯಮ ಕ್ಷೇತ್ರಕ್ಕೆ ಎಲ್ಲ ವರ್ಗದ ಜನರನ್ನೂ ತರಬೇತುಗೊಳಿಸಿ ಸೇರಿಸಿದ ಕೀರ್ತಿ ರವಿ ಅವರಿಗೆ ಸಲ್ಲುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಜಾತಿ ಜನಗಣತಿಯ ಚಿಂತನೆಯನ್ನು ತುಂಬಿದ್ದೂ ಅವರೇ. ಜಾತಿ ಜನಗಣತಿ ಮುಗಿದಿದೆ. ಈಗಲಾದರೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜು ಅವರು ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, “ವಿಶ್ವವಾಣಿ’ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ, ಮಾಜಿ ಮೇಯರ್ ಹುಚ್ಚಪ್ಪ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು, ಕೆ.ಎಂ. ರಾಮಚಂದ್ರಪ್ಪ, ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.