ಬೆಂಗಳೂರು: ಕ್ಲಬ್ ಹೌಸ್‌ನ ವಿಚಾರವೊಂದರ ಕುರಿತ ಚರ್ಚೆಯಲ್ಲಿ ಪಾಕ್ ಪರ ಘೋಷಣೆ ಕೂಗಿ ಪೋಸ್ಟ್ ಮಾಡಿದ್ದ ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ಇತರೆ ನಾಲ್ವರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಬಳ್ಳಾರಿ ಮೂಲದ ಸುರಭ್ ಮತ್ತು ಬೆಂಗಳೂರಿನ ಸಹಕಾರ ನಗರದ ರಾಹುಲ್ ಎಂಬುವರನ್ನು ವಿಚಾರಣೆ ನಡೆಸಲಾಗಿದೆ. ಹಾಗೆಯೇ ಇದುವರೆಗೂ ಸುಮಾರು 10ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಲಬ್ ಹೌಸ್‌ನ ಚರ್ಚೆ ವೇಳೆ ಕೆಲವರು ಪಾಕ್ ಪರ ಘೋಷಣೆ ಕೂಗಿದ್ದರು. ಈ ಸಂಬಂಧ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡಿದ್ದವು. ಈ ಬಗ್ಗೆ ಪರಿಶೀಲಿಸಿದ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಇಬ್ಬರು ಆರೋಪಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿ, ಕಳುಹಿಸಲಾಗಿದೆ. ಆರೋಪಿಗಳ ಪೈಕಿ ಸುರಭ್ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಸಾಫ್ಟ್ವೇರ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾನೆ. ರಾಹುಲ್ ಕೂಡ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕ್ಲಬ್ ಹೌಸ್‌ನಲ್ಲಿ ವಿಚಾರವೊಂದರ ಚರ್ಚೆ ವೇಳೆ ಕೆಲವರು ಅನಗತ್ಯವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದರು. ಅಲ್ಲದೆ, ತಾಕತ್ ಇದ್ದರೆ ಪಾಕ್ ಪರ ಘೋಷಣೆ ಕೂಗಿ ಎಂದು ಸವಾಲು ಹಾಕಿದರು. ಹೀಗಾಗಿ ಪ್ರಚೋದನೆಗೊಳಗಾಗಿ ಪಾಕ್ ಪರ ಘೋಷಣೆ ಕೂಗಿದ್ದೇವೆ ಹೊರತು ಉದ್ದೇಶಪೂರ್ವಕವಾಗಿ ಘೋಷಣೆ ಕೂಗಿಲ್ಲ. ಜತೆಗೆ ತಮಾಷೆ ಮಾಡಲು ಹೋಗಿ ಈ ರೀತಿಯ ಎಡವಟ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ