Advertisement

ಪಾಕಿಸ್ಥಾನ ಪರ ಘೋಷಣೆ ಪ್ರಕರಣ: ವರದಿ ಬಳಿಕ ಕ್ರಮ; ಸಿಎಂ, ಪರಂ ಸ್ಪಷ್ಟನೆ

09:38 PM Feb 29, 2024 | Team Udayavani |

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಪ್ರಕರಣ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ವಿಪಕ್ಷ ಬಿಜೆಪಿ ಗುರುವಾರವೂ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಅವರು ಸರಕಾರದ ನಿಲುವಿನ ಬಗ್ಗೆ ಸದನದಲ್ಲಿ ಮತ್ತೆ ಸ್ಪಷ್ಟನೆ ನೀಡಿದರು.

Advertisement

ಈ ಘಟನೆಗೆ ಸಂಬಂಧಿಸಿ ಏಳು ಮಂದಿಯನ್ನು ಕರೆಸಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಪಾಕ್‌ ಪರ ಘೋಷಣೆ ನಡೆಸಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಲಾಪ ಆರಂಭ ಆಗುತ್ತಿದ್ದಂತೆ ಮಾತನಾಡಿದ ವಿಪಕ್ಷ ನಾಯಕ ಆರ್‌.ಅಶೋಕ್‌, ಸರಕಾರ ಯಾರನ್ನೂ ಬಂಧಿಸಿಲ್ಲ. ಯಾವುದೇ ಕ್ರಮ ಕೈಗೊಳ್ಳದೆ ಗಪ್‌ಚುಪ್‌ ಆಗಿ ಕುಳಿತಿದೆ. ಹೀಗಾದರೆ ನಾಡಿನ ಜನರಿಗೆ ಏನು ಸಂದೇಶ ಕೊಡುತ್ತೀರಿ. ಹೀಗೆಯೇ ಬಿಟ್ಟು ಉಗ್ರರ ತಾಣ ಆಗಬೇಕೇ ಎಂದು ಹರಿಹಾಯ್ದರು.

ಬಳಿಕ ಉತ್ತರ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್‌,  ಘಟನೆಗೆ ಸಂಬಂಧಿಸಿ  ಏಳು ಮಂದಿಯನ್ನು ಕರೆಸಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಒಂದೊಂದು ಮಾಧ್ಯಮದಲ್ಲಿ ಒಂದೊಂದು ರೀತಿ ವರದಿ ಬಂದಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದರು. ಇದರಿಂದ ಕೆರಳಿದ ಅಶೋಕ ಆರೋಪಿಗಳನ್ನು ಒದ್ದು ಒಳಗೆ ಹಾಕುವ ಬದಲು, ಶಾಲು ಹೊದಿಸಿ, ಪೇಟ ಹಾಕಿ, ಬಿರಿಯಾನಿ ಕೊಟ್ಟು ಕಳಿಸಿದ್ದೀರಿ. ಈ ಸರಕಾರಕ್ಕೆ ಏನು ನೈತಿಕತೆ ಇದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next