ಲಕ್ನೋ: ಪ್ರೊ ಕಬಡ್ಡಿ ಲೀಗ್‌ನ ಲಕ್ನೋ ಚರಣದಲ್ಲಿ ರಿಷಾಂಕ್ ದೇವಾಡಿಗ (14 ಅಂಕ) ಅವರ ಮಿಂಚಿನ ದಾಳಿ ಹೊರತಾಗಿಯೂ ಯುಪಿ ಯೋಧಾ ತಂಡ 34-37 ಅಂಕಗಳ ಅಂತರದಿಂದ ಯು ಮುಂಬಾ ವಿರುದ್ಧ ಸೋಲು ಕಂಡಿತು. ಇದರೊಂದಿಗೆ ಆತಿಥೇಯ ತಂಡ ತವರಿನಲ್ಲಿ ಮೊದಲ ಮುಖಭಂಗ ಅನುಭವಿಸಿತು. ಒಟ್ಟಾರೆ ಕೂಟದಲ್ಲಿ ಯುಪಿಗೆ 2ನೇ ಸೋಲು ಎದುರಾಯಿತು. ಯು ಮುಂಬಾಗೆ ಇದು ಕೂಟದಲ್ಲಿ ಸಿಕ್ಕಿದ 3ನೇ ಗೆಲುವು ಆಗಿದೆ.
ಮುಂಬಾದ ಶಬ್ಬೀರ್ ಮಿಂಚು: ಇಲ್ಲಿನ ಬಾಬು ಬನಾರಸಿ ದಾಸ್ ಒಳಾಂಗಣ ಕ್ರೀಡಾಂಗಣ ದಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ ಮೊದಲಾರ್ಧದಲ್ಲಿ 15 ಅಂಕ ಗಳಿಸಿ ಮುನ್ನಡೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಯುಪಿ ಕುಸಿಯಿತು. ಯು ಮುಂಬಾ ತಿರುಗೇಟು ನೀಡಲು ಆರಂಭಿಸಿತು. ಮುಂಬಾ ತಂಡದ ಸ್ಟಾರ್ ಆಟಗಾರ ಶಬ್ಬೀರ್ ಬಾಪು (13 ಅಂಕ) ಶ್ರೇಷ್ಠ ರೈಡಿಂಗ್ ಮಾಡಿದರು. ಇವರಿಗೆ ನಾಯಕ ಅನೂಪ್ (8 ಅಂಕ) ಸಾಥ್ ನೀಡಿದರು. ಅನೂಪ್ 5 ಬೋನಸ್ ಅಂಕ ಕಲೆ ಹಾಕಿದರು ಎನ್ನುವುದು ವಿಶೇಷ. ಅನುಭವಿ ಸುರೇಂದ್ರ ಸಿಂಗ್ 5 ಯಶಸ್ವಿ ಕ್ಯಾಚ್ ಮೂಲಕ ಮುಂಬಾ ತಂಡದ ಗೆಲುವಿಗೆ ನೆರವಾದರು. ಯುಪಿ ಯೋಧಾ ಸೋತರೂ ತಂಡದ ನಾಯಕ ನಿತಿನ್ ತೋಮರ್ (7 ಅಂಕ) ಮತ್ತು ಆಟಗಾರ ಕನ್ನಡಿಗ ರಿಷಾಂಕ್ ದೇವಾಡಿಗ ಅದ್ಭುತ ಆಟದ ಮೂಲಕ ಗಮನ ಸೆಳೆದರು.
ತವರಿನಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಯುಪಿಗೆ ಈ ಸೋಲು ತೀವ್ರ ಆಘಾತವನ್ನುಂಟು ಮಾಡಿದೆ. ಈ ಸೋಲಿನಿಂದ ಯುಪಿ ತಾನಾಡಿದ ಆರು ಪಂದ್ಯಗಳಿಂದ ಮೂರರಲ್ಲಿ ಜಯ ಸಾಧಿಸಿ 18 ಅಂಕ ಗಳಿಸಿದ್ದರೆ ಮತ್ತೆ ಗೆಲುವಿನ ಲಯಕ್ಕೆ ಮರಳಿದ ಮುಂಬಾ ತಾನಾಡಿದ ಐದು ಪಂದ್ಯಗಳಲ್ಲಿ ಮೂರನೇ ಜಯ ಸಾಧಿಸಿತು. ಮುಂಬಾ ಈ ಹಿಂದಿನ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ 21-39 ಅಂಕಗಳ ಭಾರೀ ಅಂತರದಿಂದ ಸೋತಿತ್ತು.
ಮುಂಬಾ ತಂಡವು ಶನಿವಾರ ನಡೆಯುವ ಪಂದ್ಯದಲ್ಲಿ ತೆಲುಗು ತಂಡವನ್ನು ಎದುರಿಸಲಿದೆ. ದಿನದ ಇನ್ನೊಂದು ಪಂದ್ಯವು ಯುಪಿ ಯೋಧಾ ಮತ್ತು ಹರಿಯಾಣ ನಡುವೆ ನಡೆಯಲಿದೆ.
ಹರ್ಷವರ್ಧನ ಸುಳ್ಯ