Advertisement

ನಾಳೆಯಿಂದ ಪ್ರೊ ಕಬಡ್ಡಿ ಪಂದ್ಯಾವಳಿ

04:40 PM Jun 30, 2017 | Team Udayavani |

ಕಲಬುರಗಿ: ಕಬಡ್ಡಿಯನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಜು. 1ರಿಂದ ಎರಡು ದಿನಗಳ ಕಾಲ ನಗರದ ಎಸ್‌ಆರ್‌ಎನ್‌ ಮೆಹ್ತಾ ಶಾಲೆ ಮೈದಾನದಲ್ಲಿ ಪ್ರೊ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ, ಬಿಜೆಪಿ ರಾಜ್ಯ ವಕ್ತಾರ ಹಾಗೂ ಹೈದ್ರಾಬಾದ ಕರ್ನಾಟಕ ಕ್ರೀಡಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಶಶೀಲ ಜಿ. ನಮೋಶಿ ತಿಳಿಸಿದರು. 

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದ್ರಾಬಾದ್‌ ಕರ್ನಾಟಕ ಕ್ರೀಡಾಭಿವೃದ್ಧಿ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಂದ್ಯಾವಳಿ ನಡೆಯಲಿದೆ. 18 ವರ್ಷ ವಯೋಮಿತಿಯ ಬಾಲಕರ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಸಿಂಥೆಟಿಕ್‌ ಮ್ಯಾಟ್‌ ಮೇಲೆ ಪಂದ್ಯಗಳು ನಡೆಯುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು. 

ಕಲಬುರಗಿ ವಿಭಾಗದ ಬಳ್ಳಾರಿಯಿಂದ ಎರಡು ತಂಡಗಳು, ಕೊಪ್ಪಳದಿಂದ ಒಂದು ತಂಡ, ರಾಯಚೂರಿನಿಂದ ಒಂದು ತಂಡ, ಯಾದಗಿರಿ ಜಿಲ್ಲೆಯ ಒಂದು ತಂಡ, ಬೀದರ ಜಿಲ್ಲೆಯ ಒಂದು ಹಾಗೂ ಕಲಬುರಗಿಯ ಎರಡು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಲೀಗ್‌ ಕಮ್‌ ನಾಕೌಟ್‌ ಪದ್ಧತಿಯಲ್ಲಿ ಆಡಿಸಲಿರುವ ಪಂದ್ಯಾವಳಿಯಲ್ಲಿ 120 ವಿದ್ಯಾರ್ಥಿಗಳು ಹಾಗೂ 11 ಕ್ರೀಡಾ ಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ರಾಜ್ಯ ಮಟ್ಟದ ಕಬಡ್ಡಿ ಸಂಸ್ಥೆಯಿಂದ ಮಾನ್ಯತೆ ಪಡೆದ ಕ್ರೀಡಾಧಿ  ಕಾರಿಗಳು ಪಂದ್ಯಾವಳಿಯಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿರುವುದು ಮತ್ತೂಂದು ವಿಶೇಷ ಎಂದು ತಿಳಿಸಿದರು. ಎರಡು ದಿನಗಳ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಸಿಂಥೆಟಿಕ್‌ ಮ್ಯಾಟ್‌ ಮೇಲೆ ಶೂ ಧರಿಸಿ ಕ್ರೀಡಾಪಟುಗಳು ಆಡುವರು.

ಹೈದ್ರಾಬಾದ್‌ ಕರ್ನಾಟಕ ಕ್ರೀಡಾಭಿವೃದ್ಧಿ ಪ್ರತಿಷ್ಠಾನದಿಂದ ಗ್ರಾಮೀಣ ಪ್ರದೇಶದ ಕ್ರೀಡೆಗಳಾದ ಕಬಡ್ಡಿ ಮತ್ತು ಖೋಖೋ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಉತ್ತಮ ಕ್ರೀಡಾಪಟುಗಳನ್ನು ಆಯ್ಕೆಮಾಡಿ ಅವರಿಗೆ ಸೂಕ್ತ ಹಾಗೂ ಅಗತ್ಯ ತರಬೇತಿ ನೀಡುವ ಮೂಲಕ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅವಕಾಶ ಒದಗಿಸಲಾಗುತ್ತಿದೆ.

Advertisement

ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪಾರಿತೋಷಕ ಹಾಗೂ ಪದಕ ವಿತರಿಸಿ ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು. ಕಲಬುರಗಿ ನಗರದ ಹಾಗೂ ಸುತ್ತಮುತ್ತಲಿನ ಎಲ್ಲ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಬಡ್ಡಿ ಪಂದ್ಯಾವಳಿ ಯಶಸ್ವಿಗೊಳಿಸುವಂತೆ ಕೋರಿದರು. 

ಹಗಲು ರಾತ್ರಿ ಪಂದ್ಯ: ಮೆಹತಾ ಶಾಲೆ ಆವರಣದಲ್ಲಿ ಎರಡುದಿನಗಳ ಕಾಲ ಹಗಲು-ರಾತ್ರಿ ಪಂದ್ಯಗಳು ಲೀಗ್‌ ಮತ್ತು ನಾಕೌಟ್‌ ಹಂತದಲ್ಲಿ ನಡೆಯಲಿವೆ. ತಲಾ 25 ನಿಮಿಷದಂತೆ ಒಟ್ಟು 20ಕ್ಕೂ ಹೆಚ್ಚು ಪಂದ್ಯಗಳು ದಿನವೊಂದಕ್ಕೆ ನಡೆಯಲಿವೆ. ಆಟಗಾರರಿಗೆ ಪ್ರವಾಸ ಭತ್ಯೆ, ಊಟ, ವಸತಿ ನೀಡಲಾಗುವುದು.

ಬಹುಮಾನ ಮೊತ್ತವಿಲ್ಲ, ವಿಜೇತ ತಂಡಕ್ಕೆ ಪಾರಿತೋಷಕ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು. ಹೈದ್ರಾಬಾದ್‌ ಕರ್ನಾಟಕ ಕ್ರೀಡಾಭಿವೃದ್ಧಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎನ್‌.ಬಿ. ಕೆಂಚನ್ನವರ, ಕಾರ್ಯದರ್ಶಿ ಬಿ.ಎನ್‌. ಹಳೇಮನಿ, ಸಂಘಟನಾ ಕಾರ್ಯದರ್ಶಿ ಪ್ರಾಣೇಶ ಉಟಗಿ, ಬಿಜೆಪಿ ಪ್ರಮುಖ ವಿರೂಪಾಕ್ಷಪ್ಪ ವಾಗರ್ಗಿ ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next