ಮುಂಬಯಿ: ಕನ್ನಡಿಗರ ನೆಚ್ಚಿನ ತಂಡವಾದ ಬೆಂಗಳೂರು ಬುಲ್ಸ್ ಮತ್ತೊಂದು ಭರ್ಜರಿ ಪ್ರದರ್ಶನದೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕೀತೆಂಬ ನಿರೀಕ್ಷೆಯಲ್ಲಿದ್ದಾರೆ ಪ್ರೊ ಕಬಡ್ಡಿ ಅಭಿಮಾನಿಗಳು.
ಗುರುವಾರ 2 ಉಪಾಂತ್ಯ ಪಂದ್ಯಗಳು ನಡೆಯಲಿದ್ದು, ಮೊದಲ ಮುಖಾಮುಖಿಯಲ್ಲಿ ಬೆಂಗಳೂರು ಬುಲ್ಸ್ ಲೀಗ್ ಹಂತದ ಅಗ್ರಸ್ಥಾನಿ ಜೈಪುರ್ ಪಿಂಕ್ ಪ್ಯಾಂಥರ್ ತಂಡವನ್ನು ಎದುರಿಸಲಿದೆ. ಅನಂತರದ ಸೆಣಸಾಟದಲ್ಲಿ ಪುನೇರಿ ಪಲ್ಟಾನ್ ಮತ್ತು ತಮಿಳ್ ತಲೈವಾಸ್ ಮುಖಾಮುಖಿ ಆಗಲಿವೆ.
ಬುಲ್ಸ್ ಮತ್ತು ತಲೈವಾಸ್ ಎಲಿಮಿನೇಟರ್ ಪಂದ್ಯಗಳನ್ನು ಗೆದ್ದು ಬಂದ ತಂಡಗಳು. ಇದರಲ್ಲಿ ಬುಲ್ಸ್ ಆಟ ಅಮೋಘ ಮಟ್ಟದಲ್ಲಿತ್ತು. ತಲೈವಾಸ್‌ಗೆ ಟೈ ಬ್ರೇಕರ್‌ನಲ್ಲಿ ಯುಪಿ ಯೋಧಾಸ್ ವಿರುದ್ಧ ಅದೃಷ್ಟ ಕೈ ಹಿಡಿದಿತ್ತು. ಗಾಯಾಳು ಪವನ್ ಸೆಹ್ರಾವತ್ ಗೈರಲ್ಲೂ ತಲೈವಾಸ್ ಸೆಮಿಫೈನಲ್ ತನಕ ಸಾಗಿ ಬಂದದ್ದು ಅಚ್ಚರಿಯೇ ಸೈ.
ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯವನ್ನು ಬುಲ್ಸ್ ಏಕಪಕ್ಷೀಯವಾಗಿಯೇ ಗೆದ್ದಿತ್ತು (56-24). ರೈಡರ್ ಭರತ್, ವಿಕಾಸ್ ಕಂಡೋಲ, ಪಿ. ಸುಬ್ರಹ್ಮಣ್ಯನ್, ಸೌರಭ್ ನಂದಲ್ ಅವರೆಲ್ಲ ತಮ್ಮ ಮಿಂಚಿನ ಓಟವನ್ನು ಮುಂದುವರಿಸಿದರೆ ಬುಲ್ಸ್ ಮುನ್ನುಗ್ಗೀತು.
ಆದರೆ ಪ್ರಥಮ ಆವೃತ್ತಿಯ ಚಾಂಪಿಯನ್ ಆಗಿರುವ ಜೈಪುರ್ ಪಿಂಕ್ ಪ್ಯಾಂಥರ್ ಅತ್ಯಂತ ಬಲಿಷ್ಠವಾಗಿದೆ. ರೈಡರ್ ಅರ್ಜುನ್ ದೇಶ್ವಾಲ್, ಡಿಫೆನ್ಸ್ ಆಟಗಾರರಾದ ಅಂಕುಶ್ ಮತ್ತು ನಾಯಕ ಸುನೀಲ್ ಕುಮಾರ್ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಇದೊಂದು ಸಮಬಲದ ಕಾದಾಟವಾಗುವ ಸಾಧ್ಯತೆ ಹೆಚ್ಚಿದೆ.
1. ಬೆಂಗಳೂರು ಬುಲ್ಸ್- ಜೈಪುರ್ ಪಿಂಕ್ ಪ್ಯಾಂಥರ್: ರಾತ್ರಿ 7.30
2. ಪುನೇರಿ ಪಲ್ಟಾನ್-ತಮಿಳ್ ತಲೈವಾಸ್: ರಾತ್ರಿ 8.30