ಹೈದರಾಬಾದ್: ಪುನೇರಿ ಪಲ್ಟಾನ್ ಮತ್ತು ಹರ್ಯಾಣ ಸ್ಟೀಲರ್ ಪ್ರೊ ಕಬಡ್ಡಿ ಕಿರೀಟಕ್ಕೆ ಸೆಣಸಾಡಲಿವೆ. ಬುಧವಾರದ ಸೆಮಿಫೈನಲ್‌ನಲ್ಲಿ ಈ ತಂಡಗಳು ಕ್ರಮವಾಗಿ ಪಾಟ್ನಾ ಪೈರೆಟ್ಸ್ ಮತ್ತು ಹಾಲಿ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಗೆ ಸೋಲುಣಿಸಿದವು.
ಪುನೇರಿ ಕಳೆದ ಸಲದ ರನ್ನರ್ ಅಪ್ ತಂಡವಾಗಿದೆ. ಹರ್ಯಾಣ ಪ್ರಶಸ್ತಿ ಸುತ್ತು ಪ್ರವೇಶಿಸುತ್ತಿರುವುದು ಇದೇ ಮೊದಲು. ಪುನೇರಿ ಪರಾಕ್ರಮ ಮೊದಲ ಸೆಮಿಫೈನಲ್‌ನಲ್ಲಿ ಪುನೇರಿ ಪಲ್ಟಾನ್ 37-21 ಅಂತರದಿಂದ ಪಾಟ್ನಾ ಪೈರೆಟ್ಸ್‌ಗೆ ಆಘಾತವಿಕ್ಕಿ ಸತತ 2ನೇ ಸಲ ಪ್ರೊ ಕಬಡ್ಡಿ ಫೈನಲ್ ಪ್ರವೇಶಿಸಿತು.
ಆರಂಭದಲ್ಲಿ ಎರಡೂ ತಂಡಗಳು ಸಮಬಲ ಹೋರಾಟವನ್ನು ಜಾರಿಯಲ್ಲಿರಿಸಿದ್ದವು. ಆದರೆ ವಿರಾಮದ ಬಳಿಕ ಪುನೇರಿ ಒಮ್ಮೆಲೇ ಸಿಡಿದು ನಿಂತಿತು. ಹ್ಯಾಟ್ರಿಕ್ ಸಾಧನೆಯೊಂದಿಗೆ ಅತ್ಯಧಿಕ 3 ಸಲ ಪ್ರಶಸ್ತಿ ಜಯಿಸಿದ್ದ ಪಾಟ್ನಾವನ್ನು ಪರಾದಾಡುವಂತೆ ಮಾಡಿತು.
ಪುನೇರಿ ಪರ ಎಲ್ಲರೂ ಉತ್ತಮ ಪ್ರದರ್ಶನ ನೀಡಿದರು. ನಾಯಕ ಅಸ್ಲಾಮ್ ಮುಸ್ತಾಫಾ, ರೈಡರ್ ಪಂಕಜ್ ಮೋಹಿತೆ ತಲಾ 7, ಆಲ್‌ರೌಂಡರ್ ಮೊಹಮ್ಮದ್ ರೇಝ 5 ಅಂಕ ಗಳಿಸಿದರು. ಪಾಟ್ನಾ ತಂಡದ ಪರ ನಾಯಕ ಸಚಿನ್ ಸರ್ವಾಧಿಕ 5 ಅಂಕ ಗಳಿಸಿದ್ದೇ ಉತ್ತಮ ಸಾಧನೆ.
ದ್ವಿತೀಯ ಉಪಾಂತ್ಯದಲ್ಲಿ ಹರ್ಯಾಣ 31-27 ಅಂತರದಿಂದ ಜೈಪುರ್‌ಗೆ ಸೋಲಿನ ರುಚಿ ತೋರಿಸಿತು. ಹರ್ಯಾಣ ಪರ ರೈಡರ್ ವಿನಯ್ 11 ಅಂಕ, ಜೈಪುರ್ ಪರ ರೈಡರ್ ಅರ್ಜುನ್ ದೇಶ್ವಾಲ್ 14 ಅಂಕ ತಂದಿತ್ತರು.