ಬೆಂಗಳೂರು: ಆತಿಥೇಯ ಬೆಂಗಳೂರು ಬುಲ್ಸ್ ಮತ್ತೆ ಯು ಮುಂಬಾಕ್ಕೆ ಶರಣಾಗಿದೆ.
ಅಂತರ 34-45. ಪ್ರೊ ಕಬಡ್ಡಿ ಕೂಟದ ಉದ್ಘಾಟನಾ ಪಂದ್ಯದಲ್ಲಿ ಮುಂಬಾ ವಿರುದ್ಧ ಎಡವಿದ ಬುಲ್ಸ್, ಬುಧವಾರದ ಮರು ಪಂದ್ಯದಲ್ಲಿ ಸೇಡು ತೀರಿಸಿಕೊಂಡೀತೆಂಬ ನಿರೀಕ್ಷೆ ಬಲವಾಗಿತ್ತು. ಆದರೆ ಇದರಲ್ಲಿ ಸಂಪೂರ್ಣವಾಗಿ ವಿಫಲವಾಯಿತು.
16 ಪ್ರೊ ಕಬಡ್ಡಿ ಪಂದ್ಯಗಳಲ್ಲಿ ಬುಲ್ಸ್ ವಿರುದ್ಧ ಮುಂಬಾ ಸಾಧಿಸಿದ 12ನೇ ಗೆಲುವು ಇದಾಗಿದೆ. ಆದರೆ ಈ ಸೋಲಿನಿಂದ ಬೆಂಗಳೂರು ಬುಲ್ಸ್‌ನ ಅಗ್ರಸ್ಥಾನಕ್ಕೇನೂ ಧಕ್ಕೆ ಆಗಲಿಲ್ಲ. ಕೂಟದಲ್ಲಿ 5ನೇ ಜಯ ಸಾಧಿಸಿದ ಮುಂಬಾ 4ನೇ ಸ್ಥಾನಕ್ಕೆ ಏರಿತು.
ಮುಂಬಾ ಸಾಂಕ ಆಟದ ಮೂಲಕ ಗಮನ ಸೆಳೆದರೆ, ಬುಲ್ಸ್ ಪವನ್ ಸೆಹ್ರಾವತ್ ಮತ್ತು ರೈಡರ್ ಭರತ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿತು. ವಿರಾಮದ ವೇಳೆ 22-20 ಅಂತರದ ಸಣ್ಣ ಮುನ್ನಡೆಯಲ್ಲಿದ್ದ ಮುಂಬಾ, ದ್ವಿತೀಯಾರ್ಧದಲ್ಲಿ ಇನ್ನಷ್ಟು ಬಿರುಸಿನ ಪ್ರದರ್ಶನ ನೀಡಿತು. ಮುಂಬಾವನ್ನು ಓವರ್‌ಟೇಕ್ ಮಾಡಿ ಸಾಗಲು ಬುಲ್ಸ್‌ಗೆ ಯಾವ ಹಂತದಲ್ಲೂ ಸಾಧ್ಯಗಲಿಲ್ಲ.
ಇದನ್ನೂ ಓದಿ:ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್
ಮುಂಬಾ ಪರ ಅಭಿಷೇಕ್ ಸಿಂಗ್ 11, ಡಿಫೆಂಡರ್ ರಾಹುಲ್ ಸೇತ್ಪಾಲ್ ಮತ್ತು ರೈಡರ್ ವಿ. ಅಜಿತ್ ತಲಾ 8 ಅಂಕ ತಂದಿತ್ತರು. ಬೆಂಗಳೂರು ತಂಡದ ಯಶಸ್ವಿ ಆಟಗಾರರೆಂದರೆ ಪವನ್ ಸೆಹ್ರಾವತ್. ಅವರು ಪಂದ್ಯದಲ್ಲೇ ಸರ್ವಾಧಿಕ 14 ಅಂಕಗಳ ಸಾಧನೆ. ರೈಡರ್ ಭರತ್ ಅವರಿಂದ 7 ಅಂಕ ಬಂತು.