Advertisement
ಇಲ್ಲಿನ ಮಂಕಾಪುರ ಒಳಾಂಗಣ ಕ್ರೀಡಾಂಗಣದಲ್ಲಿ “ಬಿ’ ವಲಯದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಕುಮಾರ್ ಪಡೆಗೆ ಗೆಲುವು ದೊರೆಯಿತು. ಈ ಮೂಲಕ ನಿರಂತರ 2 ಸೋಲು ಹಾಗೂ ತೆಲುಗು ಟೈಟಾನ್ಸ್ ವಿರುದ್ಧ ಟೈ ಮುಜುಗರಕ್ಕೀಡಾಗಿದ್ದ ಬುಲ್ಸ್ ಚೇತರಿಸಿಕೊಂಡಿತು. ಸತತ 2 ಪಂದ್ಯಗಳ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಬೆಂಗಾಲ್ ವಾರಿಯರ್ ತಂಡಕ್ಕೆ ಸೋಲಿನ ಆಘಾತ ನೀಡಿತು.
Related Articles
Advertisement
ಒಮ್ಮೆ ಆಲೌಟ್ ತಪ್ಪಿಸಿದ ರೋಹಿತ್: 13ನೇ ನಿಮಿಷದಲ್ಲಿ ಬೆಂಗಳೂರು ತಂಡದ ಅಂಕಣದಲ್ಲಿ ಕೇವಲ ರೋಹಿತ್ ಕುಮಾರ್ ಮಾತ್ರ ಇದ್ದರು. ಆದರೆ ಈ ಸಂದರ್ಭದಲ್ಲಿ ಯಶಸ್ವಿ ರೈಡಿಂಗ್ ನಡೆಸಿ ತಂಡ ಆಲೌಟ್ ಆಗುವುದನ್ನು ತಪ್ಪಿಸಿದರು. 16ನೇ ನಿಮಿಷಕ್ಕೆ ಉಭಯ ತಂಡಗಳು ಮತ್ತೆ 9-9ರಿಂದ ಸಮಬಲ ಪಡೆದವು. ಪಂದ್ಯದ ಪ್ರಥಮಾರ್ಧ ಪೂರ್ಣಗೊಂಡಾಗ ಬೆಂಗಳೂರು 12-10ರಿಂದ ಮುನ್ನಡೆ ಪಡೆಯಿತು.
ಪಂದ್ಯದ ದ್ವಿತಿಯಾರ್ಧದಲ್ಲಿ ಬೆಂಗಳೂರು 14-13ರಿಂದ 1 ಅಂಕದ ಮುನ್ನಡೆಯಲ್ಲಿದ್ದಾಗ ಆಲೌಟ್ ಆಗುವ ಮುಜುಗರ ಅನುಭವಿಸಿತು. ಅನಂತರ ಉಭಯ ತಂಡಗಳು 16-16 ಮತ್ತೆ ಸಮಬಲ ಸಾಧಿಸಿದವು. ಇದರಿಂದ ರೋಚಕತೆ ಹೆಚ್ಚಾಯಿತು. ಗೆಲುವಿನ ಮಾಲೆ ಯಾರ ಕೊರಳನ್ನು ಅಲಂಕರಿಸುತ್ತದೆ ಎಂಬ ಬಗ್ಗೆ ಕುತೂಹಲ ಮೂಡಿತು. ಈ ಹಂತದಲ್ಲಿ ಬೆಂಗಳೂರು ತಂಡದ ಆಜಯ್ ಸೂಪರ್ ರೈಡ್ ಮಾಡಿ 4 ಅಂಕಗಳನ್ನು ತಂದರು. ಅನಂತರ ಎದುರಾಳಿ ಬೆಂಗಾಲ್ ತಂಡದ ಮೇಲೆ ಒತ್ತಡ ಆರಂಭವಾಯಿತು. ಜಾಂಗ್ ಲೀಯನ್ನು ಹಿಡಿಯುವಲ್ಲಿ ಬೆಂಗಳೂರು ರಕ್ಷಣಾ ಪಡೆ ಯಶಸ್ವಿಗೊಳ್ಳುವುದರೊಂದಿಗೆ ಬೆಂಗಾಲ್ ತಂಡ ಆಲೌಟ್ ಆಯಿತು.
ಮುಂದೆ ಸುರ್ಜೀತ್ ಸಿಂಗ್ ನಾಯಕತ್ವದ ಪಡೆ ಗಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿತಾದರೂ ಅದಕ್ಕೆ ತಕ್ಕ ಫಲ ಸಿಗಲಿಲ್ಲ. ಬೆಂಗಳೂರು ತಂಡ ರೈಡಿಂಗ್‌ನಲ್ಲಿ ಹಾಗೂ ರಕ್ಷಣೆಯಲ್ಲಿ ಚುರುಕಿನ ಪ್ರದರ್ಶನ ನೀಡಿತು. ಬುಲ್ಸ್ ಪರವಾಗಿ ರೈಡರ್ ಅಜಯ್ 8 ಅಂಕ ಸಂಪಾದಿಸಿದರೆ, ನಾಯಕ ರೋಹಿತ್ 6, ಆಶೀಶ್ ಕುಮಾರ್ 5 ಅಂಕ ಗಳಿಸಿದರು. ಬೆಂಗಾಲ್ ತಂಡದ ಪರ ಜಾಂಗ್ ಕುನ್ ಲೀ 8 ಅಂಕ ದಾಖಲಿಸಿದರು. ಎರಡೂ ತಂಡಗಳು ಒಮ್ಮೆ ಆಲೌಟ್ ಆದವು.
ಪಂದ್ಯದ ದಿಕ್ಕು ಬದಲಿಸಿದ ಅಜಯ್ ಕುಮಾರ್ಪಂದ್ಯದ ಆರಂಭದಿಂದ ಎರಡೂ ತಂಡಗಳ ನಡುವೆ ಸಮಬಲದ ಹೋರಾಟ ಇತ್ತು. ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಅನ್ನುವ ಕುತೂಹಲ ಹುಟ್ಟಿಸಿತ್ತು. ಪಂದ್ಯ ಮುಗಿಯಲು ಇನ್ನು 15 ನಿಮಿಷ ಬಾಕಿ ಇರುವಾಗ ಉಭಯ ತಂಡಗಳು 16-16ರಿಂದ ಸಮಬಲ ಸಾಧಿಸಿದ್ದವು. ಈ ಹಂತದಲ್ಲಿ ಬುಲ್ಸ್ ತಂಡದಿಂದ ರೈಡಿಂಗ್‌ಗೆ ನುಗ್ಗಿದ ಅಜಯ್ ಕುಮಾರ್ ಒಂದೇ ರೈಡಿಂಗ್‌ನಲ್ಲಿ ನಾಲ್ವರನ್ನು ಔಟ್ ಮಾಡಿದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು. ಅನಂತರ ಬುಲ್ಸ್ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.