ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆದ 9ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಮಂಗಳವಾರದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ 30-21 ಅಂಕಗಳಿಂದ ಪ್ರಬಲ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು.
ಪಂದ್ಯ ಪ್ರಬಲ ಪೈಪೋಟಿಯಿಂದ ಕೂಡಿತ್ತು.
ಎರಡೂ ತಂಡಗಳು ಪ್ರತೀ ಅಂಕಕ್ಕಾಗಿ ತೀವ್ರವಾಗಿ ಹೋರಾಡಿದ್ದರಿಂದ ಅಂಕಪಟ್ಟಿ ದೊಡ್ಡದಾಗಿ ಬೆಳೆಯಲಿಲ್ಲ.
ಗೆಲುವು ಸಾಧಿಸಿದ ತೆಲುಗು ಪರ ದಾಳಿಗಾರ ಸಿದ್ಧಾರ್ಥ ಮಿಂಚಿದರು. ಅವರು 13 ಬಾರಿ ಎದುರಾಳಿಗಳ ಕೋಟೆಯೊಳಕ್ಕೆ ನುಗ್ಗಿದರು. ಈ ಯತ್ನದಲ್ಲಿ 5 ಬಾರಿ ಯಶಸ್ವಿಯಾಗಿ ಒಟ್ಟು 7 ಅಂಕ ಗಳಿಸಿದರು. ತಂಡದಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸಿದ ಇನ್ನೊಬ್ಬ ದಾಳಿಗಾರ ಮೋನು ಗೋಯತ್. ಒಟ್ಟು 18 ಯತ್ನಗಳಲ್ಲಿ ಅವರು 9 ಅಂಕ ಗಳಿಸಿದರು. ರಕ್ಷಣೆಯಲ್ಲೂ ಅವರು ಯಶಸ್ವಿಯಾಗಿ 1 ಅಂಕ ಪಡೆದರು.
ರಕ್ಷಣೆಯಲ್ಲಿ ನಾಯಕ ಸುರ್ಜೀತ್ ಸಿಂಗ್ (4), ಪರ್ವೇಶ್ (2) ಉತ್ತಮ ನಿಯಂತ್ರಣ ಸಾಧಿಸಿದರು. ಪಾಟ್ನಾ ಪರ ಸಚಿನ್ ಉತ್ತಮ ದಾಳಿ ನಡೆಸಿದರು. ಅವರ 19 ಯತ್ನಗಳಲ್ಲಿ ಸಿಕ್ಕಿದ್ದು 6 ಅಂಕ ಮಾತ್ರ. ಆಲ್‌ರೌಂಡರ್ ರೋಹಿತ್ ಗುಲಿಯ 5 ಅಂಕ ಪಡೆದರು. ರಕ್ಷಣೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಸುನೀಲ್. ಅವರು 6 ಬಾರಿ ಎದುರಾಳಿಯನ್ನು ಕೋಟೆಯೊಳಕ್ಕೆ ಕೆಡವಿಕೊಳ್ಳಲು ಯತ್ನಿಸಿ 4 ಅಂಕ ಪಡೆದರು.
ಹರಿಯಾಣಕ್ಕೆ ಸ್ಟೀಲರ್ಸ್‌ಗೆ ಜಯ
ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 27-22 ಅಂಕಗಳಿಂದ ತಮಿಳ್ ತಲೈವಾಸ್ ತಂಡವನ್ನು ಮಣಿಸಿತು. ಈ ಪಂದ್ಯವೂ ಸಂಪೂರ್ಣ ಜಿದ್ದಾಜಿದ್ದಿಯಿಂದ ಕೂಡಿತ್ತು.