Advertisement

ಪ್ರೊ ಕಬಡ್ಡಿ ಸೆಮಿಫೈನಲ್ಸ್‌ಗೆ ಅಖಾಡ ಸಜ್ಜು: ದಿಲ್ಲಿ ವಿರುದ್ಧ ನಡೆದೀತೇ ಬುಲ್ಸ್‌ ದರ್ಬಾರ್‌?

11:34 PM Feb 22, 2022 | Team Udayavani |

ಬೆಂಗಳೂರು: ಪ್ರೊ ಕಬಡ್ಡಿ ಸೆಮಿಫೈನಲ್‌ ಸೆಣಸಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. ಬುಧವಾರದ ಮೊದಲ ಸೆಮಿ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌-ಯುಪಿ ಯೋಧ, ಬಳಿಕ ಬೆಂಗಳೂರು ಬುಲ್ಸ್‌-ದಬಾಂಗ್‌ ದಿಲ್ಲಿ ಮುಖಾಮುಖಿ ಆಗಲಿವೆ.

Advertisement

ಎಲಿಮಿನೇಟರ್‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಗೆಲುವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತರಗೊಂಡಿದ್ದಾರೆ.

ದಿಲ್ಲಿ ಬಲಿಷ್ಠ ಪಡೆ
ಭಾರತ ತಂಡವನ್ನು ಪ್ರತಿನಿಧಿಸಿದ ಸ್ಟಾರ್‌ ಆಟಗಾರರಾದ ಮಂಜೀತ್‌ ಚಿಲ್ಲರ್‌, ಜೋಗಿಂದರ್‌ ನರ್ವಾಲ್‌, ಕನ್ನಡಿಗ ಜೀವ ಕುಮಾರ್‌, ಸಂದೀಪ್‌ ನರ್ವಾಲ್‌ ಅವರನ್ನೊಳಗೊಂಡ ದಿಲ್ಲಿ ಬಹಳ ಬಿಲಿಷ್ಠ. ರೈಡಿಂಗ್‌ನಲ್ಲಿ ಯುವ ಆಟಗಾರ ನವೀನ್‌ ಕುಮಾರ್‌ ಅವರ ಅದ್ಬುತ ಪ್ರದರ್ಶನ ಕೂಡ ತಂಡಕ್ಕೆ ಆನೆಬಲ ನೀಡಲಿದೆ. ಶಾಂತ ರೀತಿಯ ಆಟದ ಮೂಲಕ ಎದುರಾಳಿ ಕೋಟೆಗೆ ನುಗ್ಗಿ ಅಂಕ ಗಳಿಸುವುದರಲ್ಲಿ ನವೀನ್‌ ನಿಸ್ಸೀಮ.

ಒಂದೊಮ್ಮೆ ತಂಡದ ರೈಡಿಂಗ್‌ ವಿಭಾಗ ಕೈಕೊಟ್ಟರೂ ರಕ್ಷಣಾ ವಿಭಾಗದವರ ಪರಾಕ್ರಮದಿಂದ ಪಂದ್ಯವನ್ನು ಗೆಲ್ಲುವ ನಂಬಿಕೆ ತಂಡಕ್ಕಿದೆ. ಭಾರತ ತಂಡದ ಮಾಜಿ ಯಶಸ್ವಿ ನಾಯಕ ಅಜಯ್‌ ಠಾಕೂರ್‌ ಆಡುವ ಬಳಗದಿಂದ ಹೊರಗುಳಿದಿದ್ದರೂ ಅವರ ಅನುಭವ, ಸಲಹೆಗಳೆಲ್ಲ ತಂಡಕ್ಕೆ ನೆರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೆಲ್ಲ ಪರಿಗಣಿಸುವಾಗ ದಿಲ್ಲಿಯನ್ನು ಮಣಿಸುವುದು ಸುಲಭವಲ್ಲ ಎಂದೇ ಹೇಳಬೇಕು.

ಬುಲ್ಸ್‌ ಜಾಣ ನಡೆ ಅಗತ್ಯ
ಚಕ್ರವ್ಯೂಹದಂತಿರುವ ದಿಲ್ಲಿ ತಂಡವನ್ನು ಮಣಿಸಲು ಬೆಂಗಳೂರು ಬುಲ್ಸ್‌ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನದ ಜತೆಗೆ ಜಾಣ ನಡೆಯನ್ನೂ ತೋರುವುದು ಅತ್ಯಗತ್ಯ. ಅದರಂತೆ ಕೆಲವು ಆಟಗಾರರನ್ನು ಟಾರ್ಗೆಟ್‌ ಮಾಡಿ ಆಡಿದರೆ ಮೇಲುಗೈ ಸಾಧ್ಯತೆ ಇದ್ದೇ ಇದೆ.

Advertisement

ಕಳೆದ ಪಂದ್ಯದಲ್ಲಿ ಮಿಂಚಿದ ನಾಯಕ ಪವನ್‌ ಸೆಹ್ರಾವತ್‌, ದಿಲ್ಲಿ ತಂಡದ ಮಾಜಿ ಆಟಗಾರ ಚಂದ್ರನ್‌ ರಂಜಿತ್‌, ಭರತ್‌, ಅಮಾನ್‌, ಮಹೇಂದರ್‌ ಈ ಸಾಧನೆಯನ್ನು ಪುನರಾವರ್ತಿಸುವ ಅಗತ್ಯವಿದೆ.

ದಿಲ್ಲಿ ತಂಡದ ದೌರ್ಬಲ್ಯವನ್ನೂ ಬುಲ್ಸ್‌ ಅರಿಯಬೇಕಿದೆ. ಅದೆಂದರೆ, ಒಂದು ಬಾರಿ ಎದುರಾಳಿ ತಂಡ ಮುನ್ನಡೆ ಸಾಧಿಸಿದರೆ ದಿಲ್ಲಿ ಒತ್ತಡ ನಿವಾರಿಸಲು ಸಾಧ್ಯವಾಗದೆ ವಿಚಲಿತಗೊಳ್ಳುತ್ತದೆ. ಆಗ ಆಟಗಾರರು ಹೊಂದಾಣಿಕೆ ಕಳೆದುಕೊಂಡು ಪಂದ್ಯವನ್ನು ಸೋತ ಅನೇಕ ನಿದರ್ಶನವಿದೆ. ಆದ್ದರಿಂದ ಆರಂಭದಲ್ಲಿಯೇ ಬುಲ್ಸ್‌ ಮುನ್ನಡೆ ಗಳಿಸಿದರೆ ಮೇಲುಗೈ ಸಾಧಿಸಲು ಅಡ್ಡಿಯಿಲ್ಲ.

ಪ್ರದೀಪ್‌ಗೆ ಸೇಡಿನ ಪಂದ್ಯ
ಕಳೆದ 7 ಸೀಸನ್‌ನಲ್ಲೂ ಪಾಟ್ನಾ ತಂಡದ ಭಾಗವಾಗಿದ್ದು, ತಂಡವನ್ನು ಮೂರು ಬಾರಿ ಚಾಂಪಿಯನ್‌ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದವರು ಪ್ರದೀಪ್‌ ನರ್ವಾಲ್‌. ಆದರೆ ಈ ಬಾರಿ ತಂಡದಿಂದ ಕೈಬಿಟ್ಟಿರುವ ಕಾರಣಕ್ಕೆ ಅವರಿಗೆ ಇದು ಸೇಡಿನ ಪಂದ್ಯ ಎನ್ನಲಡ್ಡಿಯಿಲ್ಲ. ಇದೀಗ ಯುಪಿ ಯೋಧ ತಂಡದಲ್ಲಿ ಆಡುತ್ತಿದ್ದು, ತನ್ನ ಮಾಜಿ ತಂಡಕ್ಕೆ ಸೋಲುಣಿಸುವ ಅವಕಾಶಕ್ಕೆ ಕಾದು ಕುಳಿತಿದ್ದಾರೆ. ಆದರೆ ಪಾಟ್ನಾವನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ.

ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ ಸಾರಥ್ಯದ ಪಾಟ್ನಾ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಇರಾನಿ ಆಟಗಾರ ಮೊಹಮ್ಮದ್ರೇಜ ಅವರ ಡೈವಿಂಗ್‌ ಆ್ಯಂಕಲ್‌ ಹೋಲ್ಡ್‌ನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಕೂಟದುದಕ್ಕೂ ಅವರ ರಕ್ಷಣಾತ್ಮ ಆಟವನ್ನು ಮೀರಿ ನಿಲ್ಲಲು ಅನುಭವಿ ಆಟಗಾರರೇ ವಿಫ‌ಲರಾಗಿದ್ದಾರೆ. ಜತೆಗೆ ರೈಡರ್‌ಗಳಾದ ಸಚಿನ್‌, ಮೋನು ಗೋಯತ್‌ ಉತ್ತಮ ಲಯದಲ್ಲಿದ್ದಾರೆ. “ಡು ಆರ್‌ ಡೈ’ ಸ್ಪೆಶಲಿಷ್ಟ್ ಪ್ರಶಾಂತ್‌ ಕುಮಾರ್‌ ಕೂಡ ಎದುರಾಳಿಗಳಿಗೆ ಸಿಂಹಸ್ವಪ್ನಾರಾಗಬಲ್ಲರು.

Advertisement

Udayavani is now on Telegram. Click here to join our channel and stay updated with the latest news.

Next