Advertisement

ಬೆಂಗಾಲ್‌ಗೆ ಬೋನಸ್‌ ಗೆಲುವು

06:15 AM Oct 02, 2017 | Team Udayavani |

ಚೆನ್ನೈ: ರವಿವಾರ ಸಾಗಿದ ರೋಚಕ ಪ್ರೊ ಕಬಡ್ಡಿ ಸೆಣಸಾಟದಲ್ಲಿ ಮಣಿಂದರ್‌ ಸಿಂಗ್‌ ಅವರ ಅದ್ಭುತ ಆಟ ದಿಂದ ಬೆಂಗಾಲ್‌ ವಾರಿಯರ್ ತಂಡ ಜೈಪುರ ಪಿಂಕ್‌ ಪ್ಯಾಂಥರ್ ತಂಡವನ್ನು 32-31 ಅಂಕಗಳಿಂದ ಸೋಲಿಸಿತು. ಮಣಿಂದರ್‌ ಅಂತಿಮ ರೈಡ್‌ನ‌ಲ್ಲಿ ಔಟಾದರೂ ಬೋನಸ್‌ ಅಂಕ ಗಳಿಸಿದ್ದರಿಂದ ಬೆಂಗಾಲ್‌ ಗೆಲುವಿನ ನಗೆ ಚೆಲ್ಲಿತು.

Advertisement

ಇಲ್ಲಿನ ಜವಹಾರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಣಸಾಟದಲ್ಲಿ ಎರಡೂ ತಂಡ ಗಳು ಗೆಲುವಿಗಾಗಿ ಶಕ್ತಿಮೀರಿ ಹೋರಾಡಿದವು. ಪಂದ್ಯ ಮುಗಿಯಲು ಒಂದು ನಿಮಿಷವಿರುವಾಗ ತುಷಾರ್‌ ಔಟ್‌ ಆದರು. ಇದರಿಂದ ಬೆಂಗಾಲ್‌ 31-30ರಿಂದ ಮುನ್ನಡೆ ಸಾಧಿಸಿತು. ಅಂತಿಮ ರೈಡ್‌ನ‌ಲ್ಲಿ ಮಣಿಂದರ್‌ ಅವರನ್ನು ಜೈಪುರ ಆಟಗಾರರು ಹಿಡಿದರೂ ಬೋನಸ್‌ ಅಂಕದ ಆಧಾರದಲ್ಲಿ ತೃತೀಯ ಅಂಪಾಯರ್‌ ಬೆಂಗಾಲ್‌ 32-31ರಿಂದ ಗೆಲುವು ಸಾಧಿಸಿದೆ ಎಂದು ಘೋಷಿಸಿದರು.

ಮಣಿಂದರ್‌ ಒಟ್ಟು 16 ಅಂಕ ಗಳಿಸಿ ಗೆಲುವಿನ ರೂವಾರಿ ಯಾಗಿ ಕಾಣಿಸಿಕೊಂಡರು. ಜೈಪುರದ ಪವನ್‌ ಕುಮಾರ್‌ 13 ಅಂಕ ಮತ್ತು ತುಷಾರ್‌ ಪಾಟೀಲ್‌ 6 ಅಂಕ ಗಳಿಸಿದರು.ಈ  ಗೆಲುವಿನಿಂದ ಬೆಂಗಾಲ್‌ 19 ಪಂದ್ಯಗಳಲ್ಲಿ 9ನೇ ಗೆಲುವು ದಾಖಲಿಸಿ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆ ಯಾಗುವುದನ್ನು ಖಚಿತಪಡಿಸಿತು. ಬೆಂಗಾಲ್‌ “ಬಿ’ ವಲಯ ದಲ್ಲಿ 2ನೇ ಸ್ಥಾನದಲ್ಲಿದೆ.

ಈ  ಪಂದ್ಯದಲ್ಲಿ ರೋಚಕ ಸೋಲು ಕಂಡರೂ ಜೈಪುರಕ್ಕೆ ಮುನ್ನಡೆಯುವ ಅವಕಾಶವಿದೆ. ಜೈಪುರ ಈವರೆಗೆ 15 ಪಂದ್ಯವನ್ನಾಡಿದೆ. ಇನ್ನು ಅದು ತವರಿನಲ್ಲಿ ಆಡುವ ಅವಕಾಶ ಹೊಂದಿದೆ. ತವರಿನಲ್ಲಿ ಗರಿಷ್ಠ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗಬಹುದು.

ಸಾಗಿತು ಸಮಬಲದ ಹೋರಾಟ
ಮೊದಲ ರೈಡ್‌ನ‌ಲ್ಲಿಯೇ ಪವನ್‌ ಕುಮಾರ್‌ ಜೈಪುರಕ್ಕೆ ಅಂಕ ತಂದುಕೊಟ್ಟರು. ಬೆಂಗಾಲ್‌ನ ಫೇವರಿಟ್‌ ರೈಡರ್‌ ಮಣಿಂದರ್‌ ತನ್ನ ಎರಡನೇ ಪ್ರಯತ್ನದಲ್ಲಿ ತಂಡದ ಅಂಕ ಖಾತೆ ತೆರೆದರು. 8ನೇ ನಿಮಿಷದಲ್ಲಿ ತುಷಾರ್‌ ಪಾಟೀಲ್‌ ಸೂಪರ್‌ ರೈಡ್‌ ಮೂಲಕ ಮೂರಂಕ ಗಳಿಸಿದ್ದರಿಂದ ಜೈಪುರ ಮೇಲುಗೈ ಸಾಧಿಸಿತು. ಮೊದಲ 13 ನಿಮಿಷ ಮುಗಿದಾಗ ಜೈಪುರ 9-6 ರಿಂದ ಮುನ್ನಡೆಯಲ್ಲಿತ್ತು.  ಆಬಳಿಕ ಎರಡೂ ತಂಡಗಳು ಸಮಬಲದ ಹೋರಾಟ ನೀಡುತ್ತ ಬಂದ ಕಾರಣ ಮೊದಲ ಅವಧಿಯ ಆಟ ಮುಗಿದಾಗ ಜೈಪುರ ಒಂದಂಕದ (12-11) ಮುನ್ನಡೆಯಲ್ಲಿತ್ತು.

Advertisement

ದ್ವಿತೀಯ ಅವಧಿ ಆರಂಭವಾಗಿ ಮೂರನೇ ನಿಮಿಷದಲ್ಲಿ ಬೆಂಗಾಲ್‌ ಆಲೌಟಾಯಿತು. ಬಳಿಕ ಮಣಿಂದರ್‌ ಮಿಂಚಿ ನಾಟ ಆಡಿ ಕೆಲವು ಅಂಕ ಗಳಿಸಿದ್ದರಿಂದ ಅಂಕ 20-21ರ ಸನಿಹಕ್ಕೆ  ಬಂದಿತ್ತು. ಅಂತಿಮ 7 ನಿಮಿಷವಿರುವಾಗ ಅಂಕ 22-22ರಿಂದ ಸಮಬಲಗೊಂಡಿತ್ತು. ಪಂದ್ಯ ಮುಗಿಯಲು 2 ನಿಮಿಷವಿರುವಾಗ ಜೈಪುರ ಆಲೌಟಾಯಿತು. ಇದರಿಂದ ಬೆಂಗಾಲ್‌ 29-30 ಅಂಕ ಗಳಿಸುವಂತಾಯಿತು. 

– ಶಂಕರನಾರಾಯಣ ಪಿ.

Advertisement

Udayavani is now on Telegram. Click here to join our channel and stay updated with the latest news.

Next