ಪುಣೆ: ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿ ಮುಕ್ತಾಯದ ಹಂತಕ್ಕೆ ಬಂದಿದೆ. ಗುರುವಾರ ಎರಡು ನಿರ್ಗಮನ (ಎಲಿಮಿನೇಟರ್) ಪಂದ್ಯಗಳು ನಡೆಯಲಿವೆ.
ಯುಪಿ ಯೋಧಾಸ್-ಜೈಪುರ್ ಪಿಂಕ್ ಪ್ಯಾಂಥರ್, ಪಾಟ್ನಾ ಪೈರೇಟ್ಸ್-ಯು ಮುಂಬಾ ನಡುವೆ ಹಣಾಹಣಿ ಏರ್ಪಡಲಿದೆ. ಇಲ್ಲಿ ಗೆದ್ದವರು ಕ್ರಮವಾಗಿ ಒಂದನೇ ಮತ್ತು ಎರಡನೇ ಸೆಮಿಫೈನಲ್ ಪಂದ್ಯಗಳಲ್ಲಿ ಆಡಲಿದ್ದಾರೆ. ಸೋತವರು ಹೊರಹೋಗಲಿದ್ದಾರೆ.
ಅಗ್ರಸ್ಥಾನಿ ಹರಿಯಾಣ ಸ್ಟೀಲರ್ ಈಗಾಗಲೇ ಸೆಮಿಫೈನಲ್-1ರಲ್ಲಿ, ದ್ವಿತೀಯ ಸ್ಥಾನಿ ದಬಾಂಗ್ ಡೆಲ್ಲಿ ಸೆಮಿಫೈನಲ್-2ರಲ್ಲಿ ಸ್ಥಾನ ಪಡೆದಿವೆ.ಯುಪಿ ಮತ್ತು ಪಾಟ್ನಾ 22 ಪಂದ್ಯಗಳಲ್ಲಿ ತಲಾ 13 ಪಂದ್ಯಗಳನ್ನು ಗೆದ್ದು ಮುಂದಿವೆ. ಮುಂಬಾ ಮತ್ತು ಜೈಪುರ್ ತಲಾ 12 ಪಂದ್ಯಗಳನ್ನು ಗೆದ್ದಿವೆ. ಅದರಲ್ಲೂ ಪಾಟ್ನಾವನ್ನು ಎದುರಿಸುವ ಮುಂಬಾ ಲೀಗ್ ಹಂತದ ಕಡೆಯ ದಿನ ಪ್ಲೇ ಆಫ್ಗೆ ಏರಿದ್ದು, ಅದರ ಲಯದ ಬಗ್ಗೆ ಪ್ರಶ್ನೆಗಳಿವೆ.
ಯುಪಿ ಯೋಧಾಸ್ ದಾಳಿ ಮತ್ತು ರಕ್ಷಣ ಪಡೆ ಅತ್ಯುತ್ತಮವಾಗಿದೆ. ತಂಡದ ಇಬ್ಬರು ಪ್ರಮುಖ ಆಟಗಾರರು ಆಡುವ ಸ್ಥಿತಿಯಲ್ಲಿಲ್ಲ. ಆದರೂ ಪೈಪೋಟಿ ನೀಡಲು ಸಜ್ಜಾಗಿದೆ.
3 ಬಾರಿ ಚಾಂಪಿಯನ್ ಆಗಿರುವ ಪಾಟ್ನಾ ಪೈರೇಟ್ಸ್‌ಗೆ ದೇವಾಂಕ್ ಮತ್ತು ಅಯಾನ್ ಲಯವೇ ಆತ್ಮವಿಶ್ವಾಸದ ಸಂಗತಿ. ಯು ಮುಂಬಾಕ್ಕೆ ಯುವ ಆಟಗಾರರಾದ ಅಜಿತ್ ಚೌಹಾಣ್, ರೋಹಿತ್ ರಾಘವ್ ಸ್ಫೂರ್ತಿಯಾಗಿದ್ದಾರೆ. ಜೈಪುರ ಪಿಂಕ್ ಪ್ಯಾಂಥರ್ 6ನೇ ಸ್ಥಾನಿಯಾಗಿದ್ದರೂ, ಅದಕ್ಕೆ ಅರ್ಜುನ್ ದೇಶ್ವಾಲ್ ದಾಳಿಯೇ ಮುಖ್ಯ ಚೈತನ್ಯವಾಗಲಿದೆ.