Advertisement

ಪ್ರೊ ಕಬಡ್ಡಿ: ಜೈಪುರ್‌ ಪಿಂಕ್‌ ಪ್ಯಾಂಥರ್ ವನ್ನು ಕೆಡವಿದ ಗುಜರಾತ್‌ ಜೈಂಟ್ಸ್‌

11:07 PM Dec 23, 2021 | Team Udayavani |

ಬೆಂಗಳೂರು: ಗಿರೀಶ್‌ ಮಾರುತಿ ಅವರ ಅಮೋಘ ಟ್ಯಾಕಲ್‌ ಪರಾಕ್ರಮದಿಂದ ಗುಜರಾತ್‌ ಜೈಂಟ್ಸ್‌ ಪ್ರೊ ಕಬಡ್ಡಿಯಲ್ಲಿ ಗೆಲುವಿನ ಆರಂಭ ಪಡೆದಿದೆ. ಗುರುವಾರದ ಮೊದಲ ಮುಖಾಮುಖೀಯಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ ತಂಡವನ್ನು 34-27 ಅಂಕಗಳಿಂದ ಮಣಿಸಿದೆ.

Advertisement

ಗುಜರಾತ್‌ ಪರ ಗಿರೀಶ್‌ ಮಾರುತಿ 7 ಟ್ಯಾಕಲ್‌ ಅಂಕಗಳ ಮೂಲಕ ಮಿಂಚಿದರು. ರೈಡರ್‌ ರಾಕೇಶ್‌ ನರ್ವಾಲ್‌ ಕೂಡ ಒಂದು ಬೋನಸ್‌ ಸೇರಿದಂತೆ 7 ಅಂಕ ಸಂಪಾದಿಸಿದರು. ಮತ್ತೋರ್ವ ರೈಡರ್‌ ರಾಕೇಶ್‌ ಸುಂಗ್ರೋಯ ಕೂಡ ಗಮನಾರ್ಹ ಪ್ರದರ್ಶನ ನೀಡಿ 6 ಅಂಕ ತಂದುಕೊಟ್ಟರು. ಗಿರೀಶ್‌ ಮಾರುತಿ ಅವರಿಗೆ ಸರಿಸಮನಾಗಿ ಪರ್ವೇಶ್‌ ಭೈಂಸ್ವಾಲಾ ಕೂಡ ಟ್ಯಾಕಲ್‌ನಲ್ಲಿ ಮಿಂಚಿದರು. ಇವರಿಂದ 4 ಅಂಕ ಬಂತು. ಒಂದು ಬೋನಸ್‌ ಅಂಕವಾಗಿತ್ತು.
ಇನ್ನೊಂದೆಡೆ ಜೈಪುರ್‌ ತಂಡದ ರೈಡರ್‌ ಅರ್ಜುನ್‌ ದೇಶ್ವಾಲ್‌ ಉತ್ತಮ ಹೋರಾಟ ಪ್ರದರ್ಶಿಸಿ 10 ಅಂಕ ತಂದಿತ್ತರೂ ಪ್ರಯೋಜನವಾಗಲಿಲ್ಲ. ಇವರಿಂದ ರೈಡ್‌ ಮೂಲಕ 7, ಬೋನಸ್‌ ರೂಪದಲ್ಲಿ 3 ಅಂಕ ಬಂದಿತ್ತು. ನಾಯಕ ದೀಪಕ್‌ ನಿವಾಸ್‌ ಹೂಡಾ ಆಟ ಸಾಧಾರಣ ಮಟ್ಟದಲ್ಲಿತ್ತು (4 ಅಂಕ). ಸಂದೀಪ್‌ ಧುಲ್‌ ಕೂಡ ಯಶಸ್ಸು ಕಾಣಲಿಲ್ಲ (3 ಅಂಕ).

ಗುಜರಾತ್‌ ತಂಡದ ಕೋಚ್‌ ಮನ್‌ಪ್ರೀತ್‌ ಸಿಂಗ್‌ ಮತ್ತು ನಾಯಕ ಹಾಗೂ ಡಿಫೆಂಡರ್‌ ಸುನೀಲ್‌ ಕುಮಾರ್‌ ಅವರಿಬ್ಬರೂ ಗ್ರೀನ್‌ಕಾರ್ಡ್‌ ಪಡೆದದ್ದು ಈ ಪಂದ್ಯದ ಸ್ವಾರಸ್ಯವೆನಿಸಿತು. ಈ ಎರಡೂ ತಂಡಗಳು ಕಳೆದ ಸೀಸನ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದವು. ಗುಜರಾತ್‌ 9ನೇ ಸ್ಥಾನಕ್ಕೆ ಕುಸಿದಿತ್ತು. ಜೈಪುರ್‌ ಕೂಡ ಮುಂದಿನ ಸುತ್ತಿಗೆ ತೇರ್ಗಡೆ ಆಗಿರಲಿಲ್ಲ.

ಇದನ್ನೂ ಓದಿ:ಮಣಿಪುರಕ್ಕೆ ಮಯನ್ಮಾರ್‌ ಉಗ್ರರಿಂದ ದಾಳಿ? ಕೇಂದ್ರ ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆ

ಪಟ್ನಾ ಪೈರೆಟ್ಸ್‌ಗೆ ಗೆಲುವಿನ ಶುಭಾರಂಭ
ಮೋನು ಗೋಯತ್‌ ಅವರ ಜಬರ್ದಸ್ತ್ ರೈಡಿಂಗ್‌ ಪರಾಕ್ರಮದಿಂದ ಹರಿಯಾಣ ಸ್ಟೀಲರ್ ವಿರುದ್ಧದ ದಿನದ ಅಂತಿಮ ಪಂದ್ಯದಲ್ಲಿ ಪಟ್ನಾ ಪೈರೆಟ್ಸ್‌ 42-39 ಅಂತರದ ಗೆಲುವು ದಾಖಲಿಸಿದೆ. ಮೋನು ರೈಡಿಂಗ್‌ನಲ್ಲಿ ಒಟ್ಟು 15ಅಂಕಗಳನ್ನು ಕಲೆಹಾಕಿ ಮಿಂಚಿದರು. ನಾಯಕ ಪ್ರಶಾಂತ್‌ ಕುಮಾರ್‌ ರೈ 7 ಅಂಕ ಗಳಿಸಿದರು.

Advertisement

ದಿಲ್ಲಿ ವಿರುದ್ಧ ಪುನೇರಿ ಪಲ್ಟಿ
ದ್ವಿತೀಯ ಪಂದ್ಯದಲ್ಲಿ ದಬಾಂಗ್‌ ದಿಲ್ಲಿ ವಿರುದ್ಧ ಪುನೇರಿ ಪಲ್ಟಾನ್ಸ್‌ 41-30 ಅಂತರದಿಂದ ಪಲ್ಟಿ ಹೊಡೆಯಿತು. ನವೀನ್‌ ಕುಮಾರ್‌ ಅವರ ಪ್ರಚಂಡ ಹಾಗೂ ಯಶಸ್ವಿ ರೈಡಿಂಗ್‌ ದಿಲ್ಲಿ ಮೇಲುಗೈಯಲ್ಲಿ ಪ್ರಮುಖ ಪಾತ್ರ ವಹಿಸಿತು. ನವೀನ್‌ 16 ಅಂಕ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next