Advertisement

ಪಾಟ್ನಾ ಪೈರೇಟ್‌ ರುಬ್ಬಿದ ಯು ಮುಂಬಾ

06:55 AM Sep 10, 2017 | Team Udayavani |

ಸೋನೆಪತ್‌: (ಹರಿಯಾಣ): ಕೊನೆಯಲ್ಲಿ ಅಬ್ಬರಿಸಿದರೂ ಪಾಟ್ನಾ ಪೈರೇಟ್ಸ್‌ ತಂಡಕ್ಕೆ ನೀರು ಕುಡಿಸುವಲ್ಲಿ ಯು ಮುಂಬಾ ಯಶಸ್ವಿಯಾಯಿತು. ಮೋತಿಲಾಲ್‌ ನೆಹರೂ ಸ್ಕೂಲ್‌ ಆಫ್ ನ್ಪೋರ್ಟ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪೊ› ಕಬಡ್ಡಿ ಪಂದ್ಯದಲ್ಲಿ ಪಾಟ್ನಾ ವಿರುದ್ಧ 41-51 ಅಂತರದಿಂದ ಮುಂಬಾ ಗೆಲುವು ಸಾಧಿಸಿತು. ಕಾಶಿಲಿಂಗ ಅಡಕೆ (15 ಅಂಕ), ಶ್ರೀಕಾಂತ್‌ ಜಾಧವ್‌ (13 ಅಂಕ) ಹಾಗೂ ದರ್ಶನ್‌ ಕಾಡಿಯನ್‌ (8 ಅಂಕ) ಮುಂಬಾ ಗೆಲುವಿನ ಹೀರೋಗಳು.

Advertisement

ಪ್ರದೀಪ್‌ ಏಕಾಂಗಿ ಹೋರಾಟ ವ್ಯರ್ಥ:
ಪಾಟ್ನಾಗೆ ಹರಿಯಾಣ ಚರಣ ಮೊದಲ ಪಂದ್ಯದಲ್ಲಿ ರೋಚಕ ಡ್ರಾ ತಂದುಕೊಟ್ಟಿದ್ದ ನಾಯಕ ಪ್ರದೀಪ್‌ ನರ್ವಾಲ್‌ (21 ಅಂಕ) ಮತ್ತೂಮ್ಮೆ ರೈಡಿಂಗ್‌ನಲ್ಲಿ ಮಿಂಚಿದರು. ಮತ್ತೋರ್ವ ರೈಡರ್‌ ಮೋನು ಗೋಯತ್‌ ಮೊದಲ ಅವಧಿಯಲ್ಲಿ ಇವರಿಗೆ ಸ್ವಲ್ಪ ಸಾಥ್‌ ನೀಡಿದರು. ಆದರೆ 2ನೇ ಅವಧಿಯಲ್ಲಿ ಮೋನು ವಿಫ‌ಲರಾದರು. ಜತೆಗೆ ರಕ್ಷಣಾ ವಿಭಾಗದ ವಿಶಾಲ್‌, ವಿಜಯ್‌ ವಿಫ‌ಲರಾಗಿದ್ದು ಪಾಟ್ನಾ ಸೋಲಿಗೆ ಪ್ರಮುಖ ಕಾರಣವಾಯಿತು.

ಮೊದಲ ಅವಧಿಯಲ್ಲಿ ಮುಂಬಾ ಮೇಲುಗೈ:
ಮೊದಲ ಅವಧಿಯ 10 ನಿಮಿಷದಲ್ಲಿ ಉಭಯ ತಂಡಗಳಿಂದ ಸಮಬಲದ ಸೆಣಸಾಟ. ಆದರೂ ಈ ವೇಳೆ ಮುಂಬಾಗೆ 8-5 ಅಂತರದ ಅಲ್ಪ ಮುನ್ನಡೆ. ಮುಂಬಾ ರೈಡರ್‌ಗಳಾದ ಶ್ರೀಕಾಂತ್‌ ಹಾಗೂ ಕಾಶಿಲಿಂಗ  ಅಡಕೆ ತಂಡದ ಮುನ್ನಡೆಯ ರೂವಾರಿಗಳು. ಇವರಿಬ್ಬರ ನೆರವಿನಿಂದ ಮೊದಲ ಅವಧಿಯ ಆಟ ಮುಗಿಯಲು ಇನ್ನೇನು 9 ನಿಮಿಷ 25 ಸೆಕೆಂಡ್ಸ್‌ ಬಾಕಿ ಇರುವಾಗ ಪಾಟ್ನಾ ಮೊದಲ ಬಾರಿಗೆ ಆಲೌಟಾಯಿತು. ಅಷ್ಟೇ ಅಲ್ಲ ಮೊದಲ ಅವಧಿ ಮುಗಿಯಲು ಇನ್ನೂ 1 ನಿಮಿಷ ಬಾಕಿ ಇರುವಾಗ 2ನೇ ಬಾರಿಗೆ ಪಾಟ್ನಾ ಆಲೌಗೊಳಗಾಯಿತು. ಒಟ್ಟಾರೆ ಮೊದಲ ಅವಧಿ ಮುಕ್ತಾಯಕ್ಕೆ ಮುಂಬೈ 24-14ರಿಂದ ಭರ್ಜರಿ ಮುನ್ನಡೆ ಪಡೆದುಕೊಂಡಿತು.

ಸಿಡಿದೆದ್ದ ಪಾಟ್ನಾ ಪೈರೇಟ್ಸ್‌:
2ನೇ ಅವಧಿಯ ಆಟದಲ್ಲಿ ಮುಂಬಾಗೆ ಪಾಟ್ನಾ ತಕ್ಕ ತಿರುಗೇಟು ನೀಡಿತು. 2ನೇ ಅವಧಿ ಮುಕ್ತಾಯದ 10 ನಿಮಿಷದ ಆಟ ಬಾಕಿ ಇದ್ದಾಗ ಮುಂಬಾ ಕೂಡ ಮೊದಲ ಸಲ ಆಲೌಟ್‌ ಬಲೆಗೆ ಬಿತ್ತು. ಈ ಮೂಲಕ ಪಾಟ್ನಾ ಸಿಡಿದೇಳುವ ಮುನ್ಸೂಚನೆ ನೀಡಿತು. ಪಾಟ್ನಾ ಪರ ಮೋನು ಗೋಯತ್‌, ಪ್ರದೀಪ್‌ ನರ್ವಾಲ್‌ ಮಿಂಚಿನ ದಾಳಿ ಸಂಘಟಿಸಿದರು. ಅಂತರವನ್ನು 31-34ಕ್ಕೆ ತಗ್ಗಿಸಿದರು. ಆದರೆ ಮುಂಬೈ ಇದ್ಯಾವುದಕ್ಕೂ ಜಗ್ಗಲಿಲ್ಲ. ನಂತರದ ಹಂತದಲ್ಲಿ ಮುಂಬೈ ಮತ್ತೆ ತನ್ನ ಅಂಕಗಳಿಕೆಯಲ್ಲಿ ಏರಿಕೆ ಮಾಡಿಕೊಂಡು ಮೇಲುಗೈ ಸಾಧಿಸಿತು.

– ಹೇಮಂತ್‌ ಸಂಪಾಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next