ನಾಗ್ಪುರ: ಮೊದಲೆರಡು ಪಂದ್ಯಗಳಲ್ಲಿ ಗೆಲುವಿನ ರುಚಿ ಅನುಭವಿಸಿದ್ದ ಯುಪಿ ಯೋಧಾಸ್ ರವಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಗೆ 20-40 ಅಂತರದಿಂದ ಶರಣಾಗಿದೆ.
ಜಾಂಗ್ ಕುನ್ ಲೀ ಅವರ ಅಮೋಘ ರೈಡಿಂಗ್ ಸಾಹಸದಿಂದ ಯುಪಿ ಯೋಧಾಸ್ ತಂಡ ವನ್ನು ಪಂದ್ಯದ ಏಳೇ ನಿಮಿಷದಲ್ಲಿ ಆಲೌಟ್ ಮಾಡುವ ಮೂಲಕ ಬೆಂಗಾಲ್ ಭರ್ಜರಿ ಆರಂಭ ಕಂಡುಕೊಂಡಿತು. ಕೊನೆಯ ವರೆಗೂ ಪಟ್ಟು ಸಡಿಲಿಸದೆ ಮುನ್ನುಗ್ಗಿತು. ಕುನ್ ಲೀ ಬಳಿಕ ಮಣಿಂದರ್ ಸಿಂಗ್ ರೈಡಿಂಗ್‌ನಲ್ಲಿ ಮಿಂಚತೊಡ ಗಿದರು. ವಿರಾಮದ ವೇಳೆ 22-8ರ ಮುನ್ನಡೆ ಹೊಂದಿದ್ದ ಬೆಂಗಾಲ್, ಆಗಲೇ ತನ್ನ ಗೆಲುವನ್ನು ಖಾತ್ರಿಗೊಳಿಸಿತ್ತು. ಮೊದಲಾರ್ಧದಲ್ಲಿ ಯೋಧಾಸ್ 2 ಸಲ ಆಲೌಟ್ ಸಂಕಟಕ್ಕೆ ಸಿಲುಕಿತು.
ದ್ವಿತೀಯಾರ್ಧದ ಆಟ ಸ್ವಲ್ಪ ನೀರಸವಾಗಿತ್ತು. ಆದರೂ ಕೂಟದ ಬಲಿಷ್ಠ ತಂಡವೆಂದೇ ಗುರು ತಿಸಲ್ಪಟ್ಟಿರುವ ಬೆಂಗಾಲ್ ತನ್ನ ಪ್ರಾಬಲ್ಯ ಮುಂದು ವರಿಸಿತು. ಮಣಿಂದರ್ ವಿಶ್ರಾಂತಿಗೆ ತೆರಳಿದ ಬಳಿಕ ಬೆಂಗಾಲ್‌ನ ವಿನೋದ್ ಕುಮಾರ್ ಮಿಂಚಿನ ರೈಡಿಂಗ್ ಮೂಲಕ ಗಮನ ಸೆಳೆದರು. ಯುಪಿ ಸಂಕಟ ಮುಂದುವರಿಯುತ್ತ ಹೋಯಿತು. ಪ್ರಥಮ ಅವಧಿಯಲ್ಲೇ ನಾಯಕ ನಿತಿನ್ ತೋಮರ್ ಪಾದದ ನೋವಿನಿಂದ ಹಿಂದೆ ಸರಿದದ್ದು ಯೋಧಾಸ್‌ಗೆ ಮುಳುವಾಯಿತು. ಗೆಲುವು ಖಾತ್ರಿಯಾದೊಡನೆ ಬೆಂಗಾಲ್ ತಂಡ ತನ್ನ ಹಲವು ಮೀಸಲು ಆಟಗಾರನ್ನು ಕಣಕ್ಕಿಳಿಸಿತು.
ಇದು ಬೆಂಗಾಲ್ ವಾರಿಯರ್ಗೆ ಒಲಿದ ಸತತ 2ನೇ ಗೆಲುವು. ಮೊದಲ ಪಂದ್ಯದಲ್ಲಿ ಅದು ತೆಲುಗು ಟೈಟಾನ್ಸ್‌ಗೆ ಸೋಲುಣಿಸಿತ್ತು. ಇನ್ನೊಂದೆಡೆ ಯುಪಿ ಯೋಧಾಸ್ 3 ಪಂದ್ಯಗಳಲ್ಲಿ ಅನುಭವಿಸಿದ ಮೊದಲ ಸೋಲು ಇದಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಅದು ಟೈಟಾನ್ಸ್ ಮತ್ತು ಬುಲ್ಸ್ ಗೆ ತಿವಿದಿತ್ತು. ಆ ಪಂದ್ಯಗಳ ಜೋಶ್ ಬೆಂಗಾಲ್ ವಿರುದ್ಧ ಮುಂದುವರಿಸುವಲ್ಲಿ ವಿಫಲವಾಯಿತು.
ಬೆಂಗಾಲ್ ಪರ ಕುನ್ ಲೀ ಸರ್ವಾಧಿಕ 7 ರೈಡಿಂಗ್ ಅಂಕ ತಂದಿತ್ತರು. ಮಣಿಂದರ್ ಸಿಂಗ್ ಮತ್ತು ವಿನೋದ್ ಕುಮಾರ್ ಅವರದು ತಲಾ 6 ಅಂಕಗಳ ಸಾಧನೆ. ಯೋಧಾಸ್‌ನ ರೈಡರ್ಗಳ ಪರ ಮಿಂಚಿದವರು ಸುರೇಂದರ್ ಸಿಂಗ್ ಮಾತ್ರ. ಅವರು 5 ಅಂಕ ಕೊಡಿಸಿದರು.
ಸೋಮವಾರ ವಿರಾಮ
ಪ್ರೊ ಕಬಡ್ಡಿಯ ನಾಗ್ಪುರ ಆವೃತ್ತಿಗೆ ಸೋಮವಾರ ವಿರಾಮ ದಿನ. ಮಂಗಳವಾರದ ಮೊದಲ ಪಂದ್ಯದಲ್ಲಿ ಗುಜ ರಾತ್-ಹರ್ಯಾಣ ಸೆಣಸಾಡಲಿವೆ. 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್-ತೆಲುಗು ಟೈಟಾನ್ಸ್ ಮುಖಾ ಮುಖೀಯಾಗಲಿವೆ.