Advertisement

ಪ್ರೊ ಕಬಡ್ಡಿ: ಗುಜರಾತ್‌ ಸೂಪರ್‌ ಪ್ಲೇ ಆಫ್ ಗೆ ವೇದಿಕೆ ಸಿದ್ಧ

07:35 AM Oct 22, 2017 | |

ಮುಂಬಯಿ: ಪ್ರೊ ಕಬಡ್ಡಿ ಲೀಗ್‌ ಐದರ ಪುಣೆ ಚರಣದ ಶುಕ್ರವಾರ ನಡೆದ ಅಂತಿಮ ಲೀಗ್‌ ಪಂದ್ಯ ಸಂಘರ್ಷಪೂರ್ಣವಾಗಿ ಸಾಗಿತು. “ಎ’ ವಲಯದ ಅಗ್ರಸ್ಥಾನಕ್ಕೇರಲು ಆತಿಥೇಯ ಪುನೇರಿ ಪಲ್ಟಾನ್ಸ್‌ ಕೊನೆಕ್ಷಣದವರೆಗೂ ಹೋರಾಡಿತು. 

Advertisement

ಆದರೆ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ರೈಡ್‌ ಮತ್ತು ಟ್ಯಾಕಲ್‌ನಲ್ಲಿ ಅದ್ಭುತ ನಿರ್ವಹಣೆ ನೀಡಿ 23-22 ಅಂಕಗಳಿಂದ ಜಯಭೇರಿ ಬಾರಿಸಲು ಯಶಸ್ವಿಯಾಯಿತಲ್ಲದೇ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು.

ಡಿಫೆಂಡರ್‌ಗಳೇ ಪ್ರಾಬಲ್ಯ ಮೆರೆದ ಈ ಪಂದ್ಯದಲ್ಲಿ ಗುಜರಾತ್‌ನ ಸುನೀಲ್‌ ಕುಮಾರ್‌ ಮತ್ತು ಪುನೇರಿಯ ರಿಂಕು ನರ್ವಾಲ್‌ ತಲಾ ಏಳಂಕ ಪಡೆದರು. ಡು ಆರ್‌ ಡೈ ಪ್ರಯತ್ನದಲ್ಲಿಯೇ ಹೆಚ್ಚಿನ ಅಂಕ ಪಡೆಯಲು ಉಭಯ ತಂಡಗಳು ಯೋಜನೆ ರೂಪಿಸಿದ್ದವು. ಇದರಿಂದ ಪಂದ್ಯ ಕೆಲವೊಮ್ಮೆ ನೀರಸವಾಗಿ ಕಂಡರೂ  ಸಮಬಲದ ಹೋರಾಟದೊಂದಿಗೆ ಕೊನೆಕ್ಷಣದವರೆಗೂ ಆಟ ಸಾಗಿದ್ದರಂದ ರೋಮಾಂಚಕ ಕ್ಷಣವನ್ನು ಅನುಭವಿಸುವಂತಾಯಿತು.

ಲೀಗ್‌ ಹಂತದ ಹೋರಾಟ ಮುಗಿದಿದ್ದು ಸೋಮವಾರದಿಂದ ಸೂಪರ್‌ ಪ್ಲೇ ಆಫ್ ಸೆಣಸಾಟ ಮುಂಬಯಿಯಲ್ಲಿ ಆರಂಭವಾಗಲಿದೆ. “ಎ’ ವಲಯದಲ್ಲಿ ಗುಜರಾತ್‌ ಅಗ್ರಸ್ಥಾನ, ಪುನೇರಿ ದ್ವಿತೀಯ ಮತ್ತು ಹರಿಯಾಣ ಸ್ಟೀಲರ್ ಮೂರನೇ ಸ್ಥಾನದಲ್ಲಿದ್ದರೆ “ಬಿ’ ವಲಯದಲ್ಲಿ ಬೆಂಗಾಲ್‌ ವಾರಿಯರ್ ಅಗ್ರಸ್ಥಾನ, ಪಾಟ್ನಾ ದ್ವಿತೀಯ ಮತ್ತು ಯುಪಿ ಯೋಧಾ ಮೂರನೇ ಸ್ಥಾನ ಪಡೆದಿದೆ.

“ಎ’ ಮತ್ತು “ಬಿ’ ವಲಯದ ಅಗ್ರಸ್ಥಾನದಲ್ಲಿರುವ ಗುಜರಾತ್‌ ಮತ್ತು ಬೆಂಗಾಲ್‌ ವಾರಿಯರ್ ಮಂಗಳವಾರ (ಅ. 24) 8 ಗಂಟೆಗೆ ನಡೆಯುವ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲಿಗೇರಲಿದೆ. ಸೋತ ತಂಡ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಪಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮತ್ತೆ ಫೈನಲಿಗೇರಬಹುದಾಗಿದೆ. ಆದರೆ ಪ್ರತಿ ವಲಯದ ದ್ವಿತೀಯ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಫೈನಲಿಗೇರಬೇಕಾದರೆ ಸೂಪರ್‌ ಪ್ಲೇ ಆಫ್ನಲ್ಲಿ ಮೂರು ಪಂದ್ಯ ಗೆಲ್ಲಬೇಕಾಗುತ್ತದೆ.

Advertisement

ಸೋಮವಾರ (ಅ. 23) ರಾತ್ರಿ 8 ಗಂಟೆಗೆ ನಡೆಯುವ ಮೊದಲ ಎಲಿಮಿನೇಟರ್‌ ಪಂದ್ಯ “ಎ’ ವಲಯದ ದ್ವಿತೀಯ ಸ್ಥಾನಿ (ಪುನೇರಿ ಪಲ್ಟಾನ್ಸ್‌) ಮತ್ತು “ಬಿ’ ವಲಯದ ಮೂರನೇ ಸ್ಥಾನಿ (ಯುಪಿ ಯೋಧಾ) ನಡುವೆ ನಡೆಯಲಿದೆ. 9 ಗಂಟೆಗೆ ನಡೆಯುವ ದ್ವಿತೀಯ ಎಲಿಮಿನೇಟರ್‌ ಪಂದ್ಯದಲ್ಲಿ “ಎ’ ವಲಯದ ಮೂರನೇ ಸ್ಥಾನಿ (ಹರಿಯಾಣ ಸ್ಟೀಲರ್) ಮತ್ತು “ಬಿ’ ವಲಯದ ದ್ವಿತೀಯ ಸ್ಥಾನಿ (ಪಾಟ್ನಾ ಪೈರೇಟ್ಸ್‌) ನಡುವೆ ಜರಗಲಿದೆ.

ಮಂಗಳವಾರ (ಅ. 24) ರಾತ್ರಿ 8 ಗಂಟೆಗೆ ನಡೆಯುವ ಮೊದಲ ಕ್ವಾಲಿಫೈಯರ್‌ ಪಂದ್ಯ “ಎ’ ಬಣದ ಅಗ್ರಸ್ಥಾನಿ (ಗುಜರಾತ್‌) ಮತ್ತು “ಬಿ’ ವಲಯದ ಅಗ್ರಸ್ಥಾನಿ (ಬೆಂಗಾಲ್‌ ವಾರಿಯರ್) ನಡುವೆ ನಡೆಯಲಿದ್ದು ಗೆದ್ದವರು ನೇರ ಫೈನಲಿಗೇರಿಲಿದ್ದಾರೆ. 9 ಗಂಟೆಗೆ ನಡೆಯುವ ಮೂರನೇ ಎಲಿಮಿನೇಟರ್‌ ಪಂದ್ಯ ಮೊದಲ ಮತ್ತು ದ್ವಿತೀಯ ಎಲಿಮಿನೇಟರ್‌ ಪಂದ್ಯದ ವಿಜೇತರ ನಡುವೆ ನಡೆಯಲಿದೆ.

ಗುರುವಾರ (ಅ. 26) ಚೆನ್ನೈಯಲ್ಲಿ ಎರಡನೇ ಕ್ವಾಲಿಫೈಯರ್‌ ಪಂದ್ಯವು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಮತ್ತು ಮೂರನೇ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದ ವಿಜೇತ ತಂಡ ಅ. 28ರ ಫೈನಲ್‌ನಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡದ ಜತೆ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next