ಬೆಂಗಳೂರು: ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಿಸುವ ರಾಜ್ಯದ 60 ಗ್ರಾಮ ಪಂಚಾಯ್ತಿಗಳಿಗೆ ಜಲಸಂಪನ್ಮೂಲ ಇಲಾಖೆ ವತಿಯಿಂದ ತಲಾ 1 ಕೋಟಿ ರೂ.ಬಹುಮಾನ ರೂಪವಾಗಿ ನೀಡಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಕೃಷಿ ವಿವಿಯಲ್ಲಿ ಹಮ್ಮಿಕೊಂಡಿದ್ದ ನೀರಿನ ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಅಂತರ್ಜಲ ಸಂರಕ್ಷಣೆ ಬಗ್ಗೆ ಸರ್ಕಾರ ಹಲವು ಯೋಜನೆ ಗಳನ್ನು ರೂಪಿಸಿದ್ದು, ಚೆಕ್ ಡ್ಯಾಂ ನಿರ್ಮಾಣ ಪ್ರೋತ್ಸಾಹಿ ಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 60 ಕೋಟಿ ರೂ.ಮೀಸಲಿಟ್ಟಿದೆ. ಅತಿ ಹೆಚ್ಚು ಚೆಕ್ ಡ್ಯಾಂ ನಿರ್ಮಾಣ ಮಾಡುವ ಜಿÇ್ಲೆಯ ಎರಡು ಗ್ರಾಪಂಗಳಿಗೆ ತಲಾ ಒಂದು ಕೋಟಿ ರೂ. ಬಹುಮಾನವಾಗಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಮಹದಾಯಿ, ಕೃಷ್ಣ, ಕಾವೇರಿ ಸೇರಿದಂತೆ ಹಲವು ನದಿ ನೀರಿನ ಹಂಚಿಕೆ ವಿಚಾರದಲ್ಲಿ ಅಂತರಾಜ್ಯ ಕಲಹ ಶುರು ವಾಗಿದೆ. ಅಂತರ್ಜಲ ಸಂರಕ್ಷಣೆಗೆ ಒತ್ತು ಕೊಟ್ಟರೆ ಇಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ. ರೈತರ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಜಲಸಂಪನ್ಮೂಲ ಇಲಾಖೆ 75 ಸಾವಿರ ಕೋಟಿ ರೂ. ಮುಡುಪಾಗಿಟ್ಟಿದೆ ಎಂದು ಹೇಳಿದರು.
ಕೀಲಿ ಕೈ ಕೇಂದ್ರದಲ್ಲಿದೆ: ಈ ಹಿಂದೆ ನದಿ ನೀರು ಬಳಕೆಯ ಕೀಲಿ ಕೈ ರಾಜ್ಯಗಳ ಕೈಯಲ್ಲಿತ್ತು. ಆದರೆ ಈಗ ಆ ಕೀಲಿ ಕೈ ಕೇಂದ್ರ ಸರ್ಕಾರ ಸುಪರ್ದಿಗೆ ಸೇರಿದೆ. ಆ ಹಿನ್ನೆಲೆಯಲ್ಲಿ ನೀರು ಬಿಡುವುದು ಮತ್ತು ಬಳಕೆ ಕುರಿತು ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ. ಕೆಲವು ಭಾಗಗಳಲ್ಲಿ ನದಿ ನೀರಿಗೆ ಅಕ್ರಮವಾಗಿ ಪಂಪ್ ಸೆಟ್‌ಗಳನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಕೊನೆ ಹಂತದ ರೈತರಿಗೆ ನೀರು ಸಿಗುತ್ತಿಲ್ಲ. ಈ ಸಂಬಂಧ ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಿದರು.
ಕೋಲಾರದ ಜನ ಮಾದರಿ: ನೀರಿಲ್ಲದಿದ್ದರೂ, ಹನಿ ನೀರಾವರಿ ಮೂಲಕ ತೋಟಗಾರಿಕೆ ಬೆಳೆ, ಬೆಳೆದು ಕೋಲಾರ ಜನತೆ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಆ ಜಿಲ್ಲೆಯ ಜನರನ್ನೇ ಇತರ ಜಿಲ್ಲೆಯ ಜನರು ಅನುಸರಿಬೇಕು. ನೀರಿನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂಗು ಗುಂಡಿ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ ರೈತರು ಮುಂದಾಗಬೇಕು ಎಂದರು.