ಮಣಿಪಾಲ: ಎಂದೆಂದಿಗೂ ಸಂಭ್ರಮ, ಉಲ್ಲಾಸ, ಜೀವಂತಿಕೆಯ ಸಂಕೇತವಾದ ಸ್ತ್ರೀ ಸಮಾಜದ ಕಣ್ಣು ಎಂದು ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಹೇಳಿದರು.
“ಉದಯವಾಣಿ’ಯು ನವರಾತ್ರಿ ಸಂದರ್ಭ ದಲ್ಲಿ ಆಯೋಜಿಸಿದ್ದ ನವರೂಪ ಫೋಟೋ ಸ್ಪರ್ಧೆಯಲ್ಲಿ ಬಂಪರ್ ಬಹುಮಾನ ಪಡೆದ ತಂಡಗಳಿಗೆ ಶುಕ್ರವಾರ ಮಣಿಪಾಲದ “ಉದಯವಾಣಿ’ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
“ಉದಯವಾಣಿ’ಯು ಹಬ್ಬದ ನವೋಲ್ಲಾಸಕ್ಕೆ ನವರೂಪ ನೀಡಿ ಮಹಿಳೆಯರ ಸಂಭ್ರಮವನ್ನು ಹೆಚ್ಚಿಸಿದೆ. ಮಹಿಳೆಯರಿಗೆ ಸೀರೆ ಭೂಷಣವಿದ್ದಂತೆ ಮತ್ತು ಅದು ಸೌಂದರ್ಯ ವನ್ನು ಹೆಚ್ಚಿಸುತ್ತದೆ. ನವರೂಪವು ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಸೀರೆಯುಟ್ಟು ಸಂಭ್ರಮಿಸಲು ಅವಕಾಶ ಕಲ್ಪಿಸಿದೆ. ಆಧುನಿಕ ಜಂಜಾಟದ ಬದುಕಿನಲ್ಲಿ ಉಲ್ಲಾಸ ತುಂಬಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ವಿನೋದ್ ಕುಮಾರ್ ಮಾತನಾಡಿ, 9 ದಿನಗಳಲ್ಲಿ ನವರೂಪದ ಮೂಲಕ 50 ಸಾವಿರಕ್ಕೂ ಅಧಿಕ ರೂಪಗಳು ಕಂಡವು. ನವರೂಪ ಬಾಂಧವ್ಯ ಬೆಸೆಯುವ ಸೇತುವೆ. ಜೀವನದ ಅಮೂಲ್ಯ ಗಳಿಗೆಗಳನ್ನು ಚಿತ್ರಗಳಲ್ಲಿ ಸೆರೆಹಿಡಿದಿ ಟ್ಟುಕೊಳ್ಳಲು ಮರೆಯಬೇಡಿ. ನವರೂಪದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಪಾದಕ ಅರವಿಂದ ನಾವಡ ನವರೂಪದ ವಿಸ್ತೃತ ಮಾಹಿತಿ ನೀಡಿದರು. ಉಡುಪಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಭಟ್ ಕೊಡವೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಎಚ್‌ಆರ್ ವಿಭಾಗದ ಸೀನಿಯರ್ ಮ್ಯಾನೇಜರ್ ಉಷಾರಾಣಿ ಕಾಮತ್ ವಂದಿಸಿದರು. “ಉದಯವಾಣಿ’ ಉಪಾಧ್ಯಕ್ಷ (ಮ್ಯಾಗಜಿನ್ ಮತ್ತು ಸ್ಪೆಷಲ್ ಇನಿಶಿಯೇಟಿವ್ಸ್) ರಾಮಚಂದ್ರ ಮಿಜಾರು ಸ್ವಾಗತಿಸಿ, ನಿರ್ವಹಿಸಿದರು.
ವಿಜೇತರು
ಮಂಗಳೂರಿನ ಶಾಂತಿ ಮತ್ತು ಗೆಳತಿಯರ ಬಳಗ, ಪುತ್ತೂರಿನ ರಜನಿ ಪ್ರಭು ಮತ್ತು ಗೆಳತಿಯರ ಬಳಗ ಹಾಗೂ ಕಾರ್ಕಳ ತಾಲೂಕಿನ ಮಾಳದ ಶೋಭಾ ಮತ್ತು ಗೆಳತಿಯರ ಬಳಗ ಬಂಪರ್ ಬಹುಮಾನ ಪಡೆದುಕೊಂಡಿತು.
ದೇವರ ಕೃಪೆಯಿಂದ ಅದೃಷ್ಟ ನಮ್ಮ ಬಳಗಕ್ಕೆ ಬಂದಿದೆ. ಹಬ್ಬದ ಸಂಭ್ರಮಕ್ಕೆ ನವರೂಪ ಇನ್ನಷ್ಟು ಮೆರುಗು ಕೊಟ್ಟಿದೆ. ಉದಯವಾಣಿ ನಮ್ಮ ನಿತ್ಯದ ಸಂಗಾತಿಯಾಗಿದೆ.
– ಸುಮನಾ ಪ್ರಭು, ಪುತ್ತೂರು
ಬಹುಮಾನದ ಮೊತ್ತದಿಂದ ನಾವು ಸೇವೆ ಸಲ್ಲಿಸುತ್ತಿರುವ ಶಾಲೆಗೆ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದೇವೆ.
– ಪೂರ್ಣಿಮಾ ಶೆಣೈ, ಮಾಳ
ಹೆಣ್ಣೆಂದರೆ ಲವಲವಿಕೆ, ಸಂಭ್ರಮ, ಸಡಗರ. ನವರೂಪವು ನಮ್ಮೊಳಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಮಾಡಿದೆ. ಸ್ನೇಹಿತರೆಲ್ಲರನ್ನು ಮತ್ತಷ್ಟು ಹತ್ತಿರ ಮಾಡಿ ಖುಷಿ ಹೆಚ್ಚಿಸಿದೆ.
– ವಿನೀತಾ ಶೆಟ್ಟಿ, ಮಂಗಳೂರು