Advertisement

ಪ್ರಿಯಾ ಸಾವು: ಮೂವರ ವಿರುದ್ಧ ಕೇಸ್‌

12:04 PM Aug 14, 2017 | Team Udayavani |

ಕೆ.ಆರ್‌.ಪುರ: ಕೆ.ಆರ್‌.ಪುರದ ಆಕಾಶ್‌ ನಗರದ ಎಂಇಜಿ ಬಡಾವಣೆಯ ಬಿಬಿಎಂಪಿ ಪಾರ್ಕ್‌ನಲ್ಲಿ ಕಬ್ಬಿಣದ ಸಲಾಕೆ ಬಿದ್ದು ಪ್ರಿಯಾ ಎಂಬ ಬಾಲಕಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಸ್ಥಳೀಯ ಇಂಜಿನಿಯರ್‌, ಪಾರ್ಕ್‌ ಉಸ್ತುವಾರಿ ಮತ್ತು ಸೆಕ್ಯುರಿಟಿ ಗಾರ್ಡ್‌ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ.

Advertisement

ಅವಘಡ ಸಂಭವಿಸಿದ್ದ ಪಾರ್ಕ್‌ಗೆ ಭಾನುವಾರ ಭೇಟಿ ನೀಡಿದ್ದ ಬಿಬಿಎಂಪಿಯ ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್‌, ಪಾಲಿಕೆ ಸದಸ್ಯ ಎಸ್‌.ಜಿ.ನಾಗರಾಜ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಸ್ಥಳ ಪರಿಶೀಲನೆ ನಡೆಸಿದರು. ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಾಂತ್‌ಕುಮಾರ್‌ ಸಿಂಗ್‌, “ಘಟನೆಯ ಸಂಬಂಧ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಮೂವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯ ದೃಢಪಟ್ಟಲ್ಲಿ ಕ್ರಮ ಕೈಗೊಳ್ಳಲಾಗುವುದು,’ ಎಂದರು. 

ಮಹದೇವಪುರದ ಕೃಷ್ಣಪ್ಪ ಲೇಔಟ್‌ನಲ್ಲಿನಲ್ಲಿರುವ ಪ್ರಿಯಾಳ ಮನೆಯ ಬಳಿ ಮೃತ ದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಅಂತಿಮ ದರ್ಶನಕ್ಕೆ ಆಗಮಿಸಿದ್ದ ಶಾಸಕ ಬಸವರಾಜ್‌ ಪೋಷಕರಿಗೆ ಸಾಂತ್ವಾನ ಹೇಳಿದರು. “ಪ್ರಿಯಾ ಭದ್ರತಾ ಸಿಬ್ಬಂದಿಯೊಂದಿಗೆ ಜಗಳವಾಡಿ ಪಾರ್ಕ್‌ನಲ್ಲಿ ಆಡಲು ಹೋಗಿದ್ದಳು. ಈ ವೇಳೆ ದುರ್ಘ‌ಟನೆ ಸಂಭವಿಸಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರು ನೀಡಿದ ಹೇಳಿಕೆಯನ್ನು ಖಂಡಿಸಿದ ಪೋಷಕರು ಶಾಸಕರ ಬಳಿ ಅಸಮಾಧಾನ ವ್ಯಕ್ತಪಡಿಸಿದರು. 

ಎಂಇಜಿ ಬಡಾವಣೆಯಲ್ಲಿ ಪಾಲಿಕೆಯ ಉದ್ಯಾನವನ ನವೀಕರಣಗೊಳ್ಳುತ್ತಿದ್ದು ಸಾರ್ವಜನಿಕರಿಗೆ ಇನ್ನೂ ಸಮರ್ಪಣೆಯಾಗಿಲ್ಲ. ಈ ನಡುವೆ ಅವಘಡ ಸಂಭವಿಸಿದೆ. ಕಾಮಗಾರಿ ನಡೆಸುವ ವೇಳೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಘಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ಕ್ರಮಕ್ಕೆ ಸೂಚಿಸಲಾಗುವುದು ಎಂದು ಶಾಸಕರು ಪೋಷಕರಿಗೆ ತಿಳಿಸಿದರು. 

ಹೋಗಬಾರದು ಎಂದಿದ್ದರೆ ಹೋಗುತ್ತಿರಲಿಲ್ಲ 
“ನಾನು, ಪ್ರಿಯಾ ಮತ್ತು ನಯನಾ ಪಾರ್ಕ್‌ನಲ್ಲಿ ಆಡಲು ತೆರಳಿದ್ದಾಗ ಪಾರ್ಕ್‌ನ ಗೇಟ್‌ ತೆರದಿತ್ತು. ಮಕ್ಕಳ ಪಾರ್ಕ್‌ನಲ್ಲಿ ಕೆಲಸ ನಡೆಯುತ್ತಿತ್ತು. ಅದಕ್ಕೆ ಸೆಕ್ಯೂರಿಟಿ ಗಾರ್ಡ್‌ ಆಗಲೀ ಫ‌ಲಕವಾಗಲಿ ಇರಲಿಲ್ಲ. ಹೋಗಬಾರದು ಎಂಬ ಬೋರ್ಡ್‌ ಇದ್ದಿದ್ದರೆ ನಾವು ಆಟವಾಡಲು ಹೋಗುತ್ತಿರಲಿಲ್ಲ. ಮಕ್ಕಳೆಲ್ಲ ಆಟವಾಡುತ್ತಿದ್ದರಿಂದ ನಾವು ಕೂಡ ಹೋಗಿದ್ದೆವು. ನಾವು ಯಾರೊದಿಂಗೂ ಜಗಳ ಮಾಡಲಿಲ್ಲ,’ ಎಂದು ಪ್ರಿಯಾಳ ಗೆಳತಿ ಸುಭೀಕ್ಷಾ ಹೇಳಿದ್ದಾಳೆ. 

Advertisement

ರಕ್ತದ ಮಡುವಿನಲ್ಲಿದ್ದಳ ಪ್ರಿಯಾಳ ವಿಡಿಯೋ ತೆಗೆದಯುತ್ತಿದ್ದರು
ತಲೆಗೆ ಪೆಟ್ಟು ಬಿದ್ದು ರಕ್ತದ ಮಡುವಲ್ಲಿದ್ದ ಬಾಲಕಿಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆಕೆಯನ್ನು ಆಸ್ಪತ್ರೆಗೆ ಸೇರಿಸದೇ ಕಾಲಹರಣ ಮಾಡಿದ್ದಾರೆ. ಇದು ತೀರ ವಿಷಾದನೀಯ ಸಂಗತಿ. ಕೂಡಲೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಪ್ರಾಣ ಉಳಿಸಬಹುದಿತ್ತು. ಅವಘಡಗಳು ಸಂಭವಿಸಿದ ವೇಳೆ ಸಾರ್ವಜನಿಕರು ಪೂರ್ವ ಪೀಡಿತ ಭಯಬಿಟ್ಟು ಮಾನವೀಯತೆ ಮೆರೆದರೆ ಜೀವಗಳನ್ನು ಉಳಿಸಬಹುದು ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಾಂತ್‌ಕುಮಾರ್‌ ಸಿಂಗ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next