Advertisement

ಬೆಂ.ಕೇಂದ್ರದಿಂದ ಪ್ರಿಯಾಂಕಾ ಸ್ಪರ್ಧೆಗೆ ಆಗ್ರಹ

06:36 AM Jan 24, 2019 | Team Udayavani |

ಬೆಂಗಳೂರು: ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿರುವುದು ರಾಜ್ಯ ಕಾಂಗ್ರೆಸ್ಸಿಗರಲ್ಲಿ ಹೊಸ ಹುರುಪು ತಂದಿದೆ. ಕರ್ನಾಟಕದಲ್ಲಿ ಅವರನ್ನು ಸ್ಟಾರ್‌ ಪ್ರಚಾರಕರನ್ನಾಗಿಸಿದರೆ ಹೆಚ್ಚು ಲೋಕಸಭೆ ಸೀಟು ಗೆಲ್ಲಬಹುದು ಎಂಬ ಲೆಕ್ಕಾಚಾರ ಈಗ ಆರಂಭವಾಗಿದೆ.

Advertisement

ಈ ಬೆನ್ನಲ್ಲೇ ಕರ್ನಾಟಕದಿಂದ ಅದರಲ್ಲೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಅವರು ಕಣಕ್ಕಿಳಿಯಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಇದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಲಾಭವಾಗುತ್ತದೆ ಎಂಬುದು ರಾಜ್ಯ ಕಾಂಗ್ರೆಸ್‌ ನಾಯಕರ ಅಂಬೋಣ.

ಪ್ರಿಯಾಂಕಾ ಗಾಂಧಿಯವರಿಗೆ ಬೆಂಗಳೂರಿನಿಂದ ಸ್ಪರ್ಧಿಸಲು ರಾಜ್ಯ ನಾಯಕರು ಆಹ್ವಾನ ನೀಡಬೇಕು ಎಂಬ ಬೇಡಿಕೆಯನ್ನು ಬೆಂಗಳೂರು ನಗರ ಜಿಲ್ಲಾ ಘಟಕ ಮುಂದಿಟ್ಟಿದೆ. ಅಲ್ಲದೆ, ಜ.25ರಂದು ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕದಿಂದ ಅಧಿಕೃತವಾಗಿ ಪ್ರಿಯಾಂಕಾ ಗಾಂಧಿ ಸ್ಪರ್ಧೆಗೆ ಹೆಸರು ಪ್ರಸ್ತಾಪ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿಯಾಗಿ ನಿಲ್ಲಬಲ್ಲ ಸಾಮರ್ಥ್ಯ ಹಾಗೂ ಛಾತಿ ಪ್ರಿಯಾಂಕಾ ಗಾಂಧಿಯವರಿಗೆ ಇದೆ ಎಂಬ ಭಾವನೆ ಕಾಂಗ್ರೆಸ್‌ ನಾಯಕರು ಹಾಗೂ ತಳ ಮಟ್ಟದ ಕಾರ್ಯಕರ್ತರವರೆಗಿದೆ. ಅಲ್ಲದೆ, ಪ್ರಿಯಾಂಕಾ ಅವರ ಅಜ್ಜಿ ದಿವಂಗತ ಇಂದಿರಾ ಗಾಂಧಿಯನ್ನು ಹೋಲುವ ಮುಖ ಚರ್ಯೆ ಹೊಂದಿರುವುದರಿಂದ ಜನರಿಗೆ ಹೆಚ್ಚು ಹತ್ತಿರವಾಗುತ್ತಾರೆ ಎನ್ನುವ ವಿಶ್ವಾಸ ರಾಜ್ಯ ನಾಯಕರದ್ದಾಗಿದೆ. 

ಅಲ್ಲದೇ ಇಂದಿರಾ ಗಾಂಧಿಯವರು ಚಿಕ್ಕಮಗಳೂರು ಜಿಲ್ಲೆಯಿಂದಲೇ ಸ್ಪರ್ಧೆ ಮಾಡಿ ರಾಜಕೀಯ ಮರು ಹುಟ್ಟು ಪಡೆದುಕೊಂಡಿದ್ದರು ಹಾಗೂ ಸೋನಿಯಾ ಗಾಂಧಿಯವರೂ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ನೆಹರು ಕುಟುಂಬಕ್ಕೂ, ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ.

Advertisement

ಹೀಗಾಗಿ ಪ್ರಿಯಾಂಕಾ ಗಾಂಧಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ದೊಡ್ಡ ಹುಮ್ಮಸ್ಸು ಬರಲಿದೆ ಎಂಬ ಅಭಿಪ್ರಾಯ ರಾಜ್ಯ ಮಹಿಳಾ ನಾಯಕಿಯರಲ್ಲಿ ಮೂಡಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆ ಇದೆ. ಆದರೆ, ಪ್ರಿಯಾಂಕಾ ಹೆಸರು ಪ್ರಸ್ತಾಪವಾಗುತ್ತಿರುವುದರಿಂದ ಹೈಕಮಾಂಡ್‌ ನಿರ್ಧಾರದ ಮೇಲೆ ಟಿಕೆಟ್‌ ಆಕಾಂಕ್ಷಿಗಳ ಭವಿಷ್ಯ ನಿರ್ಧಾರವಾಗಲಿದೆ. 

ಪ್ರಿಯಾಂಕಾ ಗಾಂಧಿಯವರನ್ನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಕರೆತರಬೇಕೆಂದು ಈಗಾಗಲೆ ಜಿಲ್ಲಾ ಮಹಿಳಾ ಘಟಕದಲ್ಲಿ ತೀರ್ಮಾನಿಸಲಾಗಿದ್ದು, ಲೋಕಸಭಾ ಕ್ಷೇತ್ರ ಉಸ್ತುವಾರಿ ಸೂರ್ಯನಾರಾಯಣ ಅವರಿಗೂ ತಿಳಿಸಲಾಗಿದೆ. ಜ.25 ರಂದು ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಪಕ್ಷದ ನಾಯಕರ ಎದುರು ಅಧಿಕೃತವಾಗಿ ಬೇಡಿಕೆ ಇಡಲಿದ್ದೇವೆ.
-ವೈ.ವಿನೋದಾ, ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷೆ 

ಪ್ರಿಯಾಂಕಾ ಗಾಂಧಿಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದರಿಂದ ನಮಗೆಲ್ಲ ದೊಡ್ಡ ಶಕ್ತಿ ಬಂದ ಹಾಗಾಗಿದೆ. ಮಹಿಳೆಯರಲ್ಲಿ ಹೊಸ ಉತ್ಸಾಹ ಮೂಡಿದೆ. ಅವರು ರಾಜ್ಯದ ಯಾವುದಾದರೂ  ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ಮುಕ್ತವಾಗಿ ಸ್ವಾಗತಿಸುತ್ತೇವೆ. ಅದರಿಂದ ರಾಜ್ಯಕ್ಕಷ್ಟೇ ಅಲ್ಲ. ದೇಶದಲ್ಲಿಯೇ ಕಾಂಗ್ರೆಸ್‌ಗೆ ದೊಡ್ಡ ಬಲ ಬಂದಂತಾಗುತ್ತದೆ.
-ಡಾ.ಪುಷ್ಪಾ ಅಮರನಾಥ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next