ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟಿ ಪ್ರಿಯಾಂಕಾ ಉಪೇಂದ್ರ ಈಗ ಸದ್ದಿಲ್ಲದೆ ಮತ್ತೂಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಆ ಸಿನಿಮಾದ ಹೆಸರು “ಕೈಮರ’.
ಹಾರಾರ್ ಕಂ ಸೈಕಲಾಜಿಕಲ್ ಕಥಾಹಂದರ ಹೊಂದಿರುವ “ಕೈಮರ’ ಸಿನಿಮಾದಲ್ಲಿ ಪ್ರಿಯಾಂಕ ಉಪೇಂದ್ರ ಅವರೊಂದಿಗೆ ಪ್ರಿಯಮಾಣಿ, ಛಾಯಾಸಿಂಗ್, ಮತ್ತಿಯಳಗನ್, ವಿನಯ್ ಗೌಡ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಜಯ ದಶಮಿಯ ಶುಭ ಸಂದರ್ಭದಲ್ಲಿ “ಕೈಮರ’ ಸಿನಿಮಾದ ಮುಹೂರ್ತ ನೆರವೇರಿದ್ದು, ಇದೇ ಅಕ್ಟೋಬರ್ ಎರಡನೇ ವಾರದಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
ಖ್ಯಾತ ನಿರ್ದೇಶಕ ಪಿ. ವಾಸು ಅವರ ಸೋದರನ ಪುತ್ರ ಗೌತಮ್ ವಿಮಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿ. ಮತ್ತಿಯಳಗನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ,
ಮುಹೂರ್ತದ ಬಳಿಕ “ಕೈಮರ’ ಸಿನಿಮಾದ ಬಗ್ಗೆ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, “ಈ ಹಿಂದೆ ಸಾಕಷ್ಟು ಹಾರಾರ್ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ “ಕೈಮರ’ ಅದೆಲ್ಲದಕ್ಕಿಂತ ಭಿನ್ನವಾದ ಸಿನಿಮಾ. ಕನ್ನಡದಲ್ಲಿ ಇಂತಹ ವಿಭಿನ್ನ ಜಾನರ್ ಸಿನಿಮಾಗಳ ಸಂಖ್ಯೆ ಕಡಿಮೆ. ಅಂಥ ಅಪರೂಪದ ಸಿನಿಮಾಗಳ ಸಾಲಿಗೆ “ಕೈಮರ’ ಕೂಡ ಸೇರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಗೌತಮ್ ವಿಮಲ್, “ಇದೊಂದು ಹಾರಾರ್ ಕಂ ಸೈಕಲಾಜಿಕಲ್ ಸಬೆjಕ್ಟ್ ಸಿನಿಮಾ. ಸುಮಾರು ಮೂರು ವರ್ಷಗಳಿಂದ “ಕೈಮರ’ ಸಿನಿಮಾದ ಕೆಲಸಗಳು ನಡೆಯುತ್ತಿದೆ. ಆದರೆ ಕೋವಿಡ್‌ನಿಂದಾಗಿ ಚಿತ್ರೀಕರಣ ಆರಂಭವಾಗುವುದು ಸ್ವಲ್ಪ ತಡವಾಯಿತು. ಈಗ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದ್ದು, ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ ಬಹುತೇಕ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
“ಕೈಮರ’ ಸಿನಿಮಾಕ್ಕೆ ಪಿ. ವಿಮಲ್ ಕಥೆ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಆರಂಭದಲ್ಲಿ “ಕೈಮರ’ ಸಿನಿಮಾವನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.