ನಟಿ ಪ್ರಿಯಾಂಕಾ ಉಪೇಂದ್ರ ಮೊದಲ ಬಾರಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ, ಆ್ಯಕ್ಷನ್-ಥ್ರಿಲ್ಲರ್ ಕಥಾಹಂದರದ “ಉಗ್ರಾವತಾರ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.
ಈಗಾಗಲೇ “ಉಗ್ರಾವತಾರ’ ಸಿನಿಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿ ಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದೆ. ಪ್ರಿಯಾಂಕಾ ಉಪೇಂದ್ರ ಅವರ ಜನ್ಮದಿನದ ಸಂದರ್ಭದಲ್ಲಿ “ಉಗ್ರಾವತಾರ’ ಸಿನಿಮಾದ ಹಾಡುಗಳನ್ನು ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, “ಇಲ್ಲಿಯವರೆಗೆ ಮಾಡಿದ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಈ ಸಿನಿಮಾದಲ್ಲಿದೆ. ಮೊದಲ ಬಾರಿಗೆ ಕಂಪ್ಲೀಟ್ ಆ್ಯಕ್ಷನ್ ಲುಕ್ ಇರುವಂಥ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ. ಇಡೀ ಚಿತ್ರತಂಡದ ಪ್ರಯತ್ನದಿಂದ ಒಂದು ಒಳ್ಳೆಯ ಸಿನಿಮಾ ಮೂಡಿಬಂದಿದೆ. ಮೊದಲ ಬಾರಿ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಡ್ನೂಪ್ ಬಳಸದೆ ಫೈಟ್ ಮಾಡಿದ್ದೇನೆ. ಇದಕ್ಕಾಗಿ ತರಬೇತಿ ಪಡೆಯಬೇಕಾಯಿತು. ಮಹಿಳೆಯರ ಮೇಲಿನ ಸಮಸ್ಯೆಗಳನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವಿದೆ. ಆದಷ್ಟು ಬೇಗ ಸಿನಿಮಾ ಬಿಡುಗಡೆಯಾಗಲಿದ್ದು, ಎಲ್ಲರೂ ಬಂದು ಸಿನಿಮಾ ನೋಡಿ ಹಾರೈಸಿ’ ಎಂದ ರು.
ಗುರುಮೂರ್ತಿ ನಿರ್ದೇಶನದಲ್ಲಿ ಮೂಡಿಬಂದಿರುವ “ಉಗ್ರಾವತಾರ’ ಸಿನಿಮಾವನ್ನು ಎಸ್. ಜಿ ಸತೀಶ್ ನಿರ್ಮಾಣ ಮಾಡಿದ್ದಾರೆ. “ಉಗ್ರಾವತಾರ’ ಸಿನಿಮಾದಲ್ಲಿ ಪ್ರಿಯಾಂಕಾ ಅವರೊಂದಿಗೆ ಸುಮನ್, ಪವಿತ್ರಾ ಲೋಕೇಶ್, ಶೋಭಾ, ನಟರಾಜ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ.
ಚಿತ್ರದ ಹಾಡುಗಳಿಗೆ ರಾಧಾಕೃಷ್ಣ ಬಸ್ರೂರು ಸಂಗೀತವಿದ್ದು, ಕಿನ್ನಾಳ್ ರಾಜ್ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. “ಸಲಗ’ ಸಿನಿಮಾದ “ಕಹಚಲಿಗೇ ಬೆಂಗಳೂರು ದೇಖನೀಕೊ’ ಗೀತೆಯನ್ನು ಹಾಡಿರುವ ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ “ಉಗ್ರಾವತಾರ’ ಸಿನಿಮಾದ “ಅಯ್ಯೋ ಮಾಜೋದೇವ, ಅಯ್ಯೋಯ್ಯೋ ಮಾಜೋದೇವ’ ಎಂಬ ಗೀತೆಗೆ ಧ್ವನಿಯಾಗಿದ್ದಾರೆ. ಬಸೋಬಿ ಸಾಹಿತ್ಯದ ಕೊಂಕಣಿ ಭಾಷೆಯಲ್ಲಿ ಈ ಹಾಡು ಮೂಡಿಬಂದಿದೆ.