ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಡಿಟೆಕ್ಟಿವ್ ತೀಕ್ಷ್ಣ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಉಪೇಂದ್ರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಈ ಚಿತ್ರವನ್ನು ತ್ರಿವಿಕ್ರಮ ರಘು ನಿರ್ದೇಶಿಸಿದ್ದು, ಗುತ್ತ ಮುನಿಪ್ರಸನ್ನ, ಮುನಿವೆಂಕಟ್ ಚರಣ್ ಮತ್ತು ಪುರುಷೋತ್ತಮ್ .ಬಿ.ಕೊಯೂರು ನಿರ್ಮಿಸಿದ್ದಾರೆ.
ಟ್ರೇಲರ್ ರಿಲೀಸ್ ಮಾಡಿ ಮಾತನಾಡಿದ ಉಪೇಂದ್ರ, “ಡಿಟೆಕ್ಟಿವ್ ಪಾತ್ರ ಎಲ್ಲಾ ಹೆಂಗಸರಲ್ಲಿ ಇರುತ್ತೆ. ನನ್ನ ಮನೆಯಲ್ಲೂ ಆ ಪಾತ್ರವಿದೆ. ಪ್ರತಿಯೊಬ್ಬ ಪತಿಗೂ ಡಿಟೆಕ್ಟಿವ್ ಹೆಂಡತಿ ಇರುತ್ತಾರೆ. ಇದು ಪ್ರಿಯಾಂಕಾ ಅವರ 50ನೇ ಚಿತ್ರ. ನಾನಿನ್ನೂ 46ರಲ್ಲಿ ಇದ್ದೇನೆ. ಈ ಸಿನಿಮಾವು ಹಿಟ್ ಆಗಲಿ. ಒಟ್ಟಿಗೆ 100 ಸಿನಿಮಾಗಳಿಗೆ ಒಮ್ಮೆಗೆ ಸಹಿ ಹಾಕುವಂತೆ ಆಗಲಿ’ ಎಂದು ಶುಭ ಕೋರಿದರು.
“ನಾನು 50 ಸಿನಿಮಾಗಳಲ್ಲಿ ನಟಿಸಲು ಚಿತ್ರರಂಗ ಕಾರಣ. ನಿರ್ದೇಶಕರು, ನಿರ್ಮಾಪಕರು ನನ್ನನ್ನು ಆಯ್ಕೆ ಮಾಡಿರುವುದರಿಂದ ಇಷ್ಟೊಂದು ಸಿನಿಮಾ ಮಾಡಲಾಯಿತು. ಈ ಚಿತ್ರದಲ್ಲಿ ಪ್ರತಿಯೊಂದು ಅಂಶವನ್ನು ಕೇಳಿಕೊಂಡು ಮಾಡುತ್ತಿದ್ದೆ. ಎಲ್ಲಾ ಕಲಾವಿದರು ತುಂಬಾ ಆಸಕ್ತಿ ವಹಿಸಿ ನಟಿಸಿದ್ದಾರೆ. ಮಧ್ಯರಾತ್ರಿ 2 ಆದರೂ ನಾವೆಲ್ಲರೂ ಉಲ್ಲಾಸದಿಂದ ಕೆಲಸ ಮಾಡಿದ್ದೇವೆ. ಮಾನಸಿಕವಾಗಿ ಚುರುಕು ಇರುವ ರೋಲ್‌ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ಪ್ರಿಯಾಂಕಾ.
ಉಳಿದಂತೆ ವಿಜಯ್ ಸೂರ್ಯ, ಸಿದ್ಲಿಂಗು ಶ್ರೀಧರ್ ಸೇರಿದಂತೆ ಚಿತ್ರತಂಡ ತಮ್ಮ ಅನಿಸಿಕೆ ಹಂಚಿಕೊಂಡರು.