ತಮ್ಮ ಮಕ್ಕಳನ್ನು ಪೋಷಕರು ಯಾವ ಶಾಲೆಗಳಲ್ಲಿ ಓದಿಸಬೇಕು, ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಗುಣಮಟ್ಟ ಹೇಗಿರುತ್ತದೆ ಎಂಬ ಚರ್ಚೆ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು ನಟಿ ಪ್ರಿಯಾಂಕಾ ಉಪೇಂದ್ರ ತೆರೆಮೇಲೆ ಪಾಠ ಮಾಡಲು ಹೊರಟಿದ್ದಾರೆ. ಅದು “ಮಿಸ್ ನಂದಿನಿ’ ಚಿತ್ರದ ಮೂಲಕ.
ಪ್ರಿಯಾಂಕಾ ಉಪೇಂದ್ರ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ “ಮಿಸ್ ನಂದಿನಿ’ ಎಂದು ಹೆಸರಿಡಲಾಗಿದ್ದು, ಎಸ್.ಆರ್ ಗುರುದತ್ತ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. “ಮಿಸ್ ನಂದಿನಿ’ ಚಿತ್ರದಲ್ಲಿ ಪ್ರಿಯಾಂಕಾ ಸರ್ಕಾರಿ ಶಾಲೆಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸರ್ಕಾರಿ ಶಾಲೆಗಳು ಖಾಸಗಿ ಶಾಲೆಯ ಗುಣಮಟ್ಟಕ್ಕೆ ಏಕೆ ಏರಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳ ಮುಂದಿರುವ ಸವಾಲುಗಳು ಮಕ್ಕಳ ಮನಸ್ಥಿತಿ ಮೊದಲಾದ ಸಂಗತಿಗಳ ಸುತ್ತ “ಮಿಸ್ ನಂದಿನಿ’ ಚಿತ್ರದ ಕಥೆ ಸಾಗಲಿದೆ. ಇದೊಂದುಮಕ್ಕಳ ಚಿತ್ರವಾಗಿದ್ದು, ಚಿತ್ರದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಪ್ರಯತ್ನ ಮಾಡಲಾಗಿದೆ ಎನ್ನುತ್ತದೆ ಚಿತ್ರತಂಡ.
ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸುತ್ತಿಲ್ಲ: ಅಭಿಮಾನಿಗಳಲ್ಲಿ ಮನವಿ ಮಾಡಿದ ಧ್ರುವ ಸರ್ಜಾ
ಇನ್ನು ಇತ್ತೀಚಿನ ದಿನಗಳಲ್ಲಿ ಹೊಸಥರದ ಕಥೆಗಳು ಮತ್ತು ಹೊಸಥರದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಗಮನ ಸೆಳೆಯುತ್ತಿರುವ ನಟಿ ಪ್ರಿಯಾಂಕಾ ಉಪೇಂದ್ರ, “ಮಿಸ್ ನಂದಿನಿ’ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮಾತುಗಳನ್ನಾಡುತ್ತಾರೆ.
“ಇದೊಂದು ಒಳ್ಳೆಯ ಮೆಸೇಜ್ ಇರುವಂಥ ಸಿನಿಮಾ’ ಎನ್ನುವ ಪ್ರಿಯಾಂಕಾ, “ನಿಜಜೀವನದಲ್ಲಿ ನನಗೆ ಟೀಚರ್ ಆಗುವ ಆಸೆಯಿತ್ತು. ಆದ್ರೆ ಕಾರಣಾಂತರಗಳಿಂದ ಟೀಚರ್ ಆಗಲು ಸಾಧ್ಯವಾಗಲಿಲ್ಲ. ಈಗ ಆ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.