Advertisement

ಮತ್ತೆರೆಡು ಚಿತ್ರ ಒಪ್ಪಿದ “ಪ್ರಿಯಾಂಕ ಉಪೇಂದ್ರ’

09:51 AM Oct 25, 2019 | Lakshmi GovindaRaju |

ಪ್ರಿಯಾಂಕ ಉಪೇಂದ್ರ ಅವರು “ದೇವಕಿ’ ಸಿನಿಮಾ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಪ್ರಿಯಾಂಕ ಉಪೇಂದ್ರ ಅವರು ಒಂದಷ್ಟು ಕಥೆಗಳನ್ನು ಕೇಳುತ್ತಲೇ ಇದ್ದರು. ಆದರೆ, ತಮಗೆ ಸೂಕ್ತ ಎನಿಸುವ ಕಥೆ, ಪಾತ್ರವನ್ನು ಎದುರು ನೋಡುತ್ತಿದ್ದರು. ಈಗ ಎರಡು ಕಥೆಗಳನ್ನು ಅವರು ಒಪ್ಪಿದ್ದಾರೆ. ಆ ಪೈಕಿ ಒಂದು ಹಾರರ್‌ ಸಿನಿಮಾ ಎಂಬುದು ವಿಶೇಷ.

Advertisement

“ಮಮ್ಮಿ’ ನಂತರ ಪುನಃ ಪ್ರಿಯಾಂಕ ಅವರು ಹಾರರ್‌ ಕಥೆಗೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಅಂದಹಾಗೆ, ಈ ಬಾರಿಯೂ ಪ್ರಿಯಾಂಕ ಅವರು ಯುವ ನಿರ್ದೇಶಕರಿಗೆ ಅವಕಾಶ ನೀಡಿದ್ದಾರೆ. ಹಿರಿಯ ನಿರ್ದೇಶಕ ಪಿ.ವಾಸು ಅವರ ಸಹೋದರನ ಮಗ ಗೌತಮ್‌ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾಂಕ ಅವರು ಕಾಣಿಸಿಕೊಳ್ಳಲಿದ್ದಾರೆ. ಗೌತಮ್‌ ಅವರು ಈ ಹಿಂದೆ ತಮಿಳು ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದು,

ಈಗ ಪ್ರಿಯಾಂಕ ಉಪೇಂದ್ರ ಅವರ ಸಿನಿಮಾ ನಿರ್ದೇಶನ ಮಾಡುವ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಪಿ.ವಾಸು ಅವರ ಸಹೋದರ ವಿಮಲ್‌ ಈ ಚಿತ್ರಕ್ಕೆ ಕಥೆ ಹೆಣೆದಿದ್ದಾರೆ. ನವೆಂಬರ್‌ 9 ರಂದು ಪ್ರಿಯಾಂಕ ಅವರ ಬರ್ತ್‌ಡೇ ಅಂಗವಾಗಿ ಹೊಸ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಲು ಚಿತ್ರತಂಡ ತಯಾರು ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಪ್ರಿಯಾಂಕ ಅವರು ಗುರುಮೂರ್ತಿ ಎಂಬ ಮತ್ತೊಬ್ಬ ಯುವ ನಿರ್ದೇಶಕರ ಚಿತ್ರದಲ್ಲೂ ನಟಿಸಲಿದ್ದಾರೆ.

ಅದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿದ್ದು, ಗುರುಮೂರ್ತಿ ಅವರ ಮೊದಲ ನಿರ್ದೇಶನದ ಚಿತ್ರವದು. ಈ ಚಿತ್ರದಲ್ಲಿ ಪ್ರಿಯಾಂಕ ಅವರು ಖಾಕಿ ಧರಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಪ್ರಿಯಾಂಕ ಅವರು “ಸೆಕಂಡ್‌ ಹಾಫ್’ ಚಿತ್ರದಲ್ಲಿ ಪೊಲೀಸ್‌ ಪೇದೆ ಪಾತ್ರ ನಿರ್ವಹಿಸಿದ್ದರು. ಸದ್ಯಕ್ಕೆ ಆ ಎರಡು ಚಿತ್ರಗಳ ಶೀರ್ಷಿಕೆ ಏನು, ಯಾವಾಗ ಚಿತ್ರೀಕರಣ ನಡೆಯಲಿದೆ, ಯಾರೆಲ್ಲಾ ನಟಿಸುತ್ತಿದ್ದಾರೆ, ತಂತ್ರಜ್ಞರು ಯಾರು ಇರುತ್ತಾರೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next