Advertisement

ನಿರ್ಭೀತಿಯಿಂದ ಮತ ಚಲಾಯಿಸಿ: ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌

06:00 AM Apr 15, 2018 | Team Udayavani |

ಸಿದ್ದಾಪುರ: ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ನಿರ್ಭೀತಿಯಿಂದ, ಮುಕ್ತವಾಗಿ ಮತ ಚಲಾಯಿಸುವಂತಾಗಲು ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡುತ್ತಿದೆ. ನಕ್ಸಲ್‌ಪೀಡಿತ ಮತಗಟ್ಟೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಬಂದೋಬಸ್ತ್ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮತ್ತು ಎಸ್ಪಿ ಲಕ್ಷ್ಮಣ ಬ. ನಿಂಬರಗಿ ಹೇಳಿದರು. 

Advertisement

ಅವರು ಶನಿವಾರ ಕುಂದಾಪುರ ತಾಲೂಕಿನ ನಕ್ಸಲ್‌ ಪೀಡಿತ ಪ್ರದೇಶವಾದ ಹಳ್ಳಿಹೊಳೆ ಗ್ರಾಮದ ಸುಳುಗೋಡು ಶಾಲೆಯಲ್ಲಿ ಮತ ಜಾಗೃತಿ ಸಭೆಯಲ್ಲಿ ಗ್ರಾಮಸ್ಥರ ಸಮಸ್ಯೆ ಹಾಗೂ ಅಹವಾಲು ಆಲಿಸಿ, ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಶೇ. 100 ಮತದಾನ ನಿರೀಕ್ಷೆ ಶತ ಪ್ರತಿಶತ ಮತದಾನದ ನಿರೀಕ್ಷೆ ಇರಿಸಿಕೊಳ್ಳಲಾಗಿದ್ದು, ಮತದಾರರು ಯಾವುದೇ ಆಸೆ- ಆಮಿಷಕ್ಕೆ ಒಳಗಾಗದೆ ಪ್ರಜಾಪ್ರಭುತ್ವದ ಆಶಯಕ್ಕೆ ಬದ್ಧರಾಗಿ ಮತದಾನ ಮಾಡಿ ಎಂದು ಕರೆ ನೀಡಿದರು. 

ಅಂಗವಿಕಲರು, ಅನಾರೋಗ್ಯ ಪೀಡಿತರು ಹಾಗೂ ವೃದ್ಧರನ್ನು ಮತಗಟ್ಟೆಗೆ ಕರೆತರಲು ಆಯೋಗ ವಾಹನ ವ್ಯವಸ್ಥೆ ಕಲ್ಪಿಸಲಿದೆ. ಅಗತ್ಯ ಇರುವವರು ಸ್ಥಳೀಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಬೇಕು. ಪ್ರತಿ ಬೂತ್‌ನಲ್ಲಿ ಗಾಲಿಕುರ್ಚಿ ವ್ಯವಸ್ಥೆ ಮಾಡಲಾಗುತ್ತದೆ. ಎರಡು ಕಿ.ಮೀ.ಗಿಂತ ಹೆಚ್ಚು ದೂರದಿಂದ ಬಂದು ಮತದಾನ ಮಾಡಬೇಕಾದ ಪರಿಸ್ಥಿತಿ ಇರುವ ಪ್ರದೇಶಗಳಲ್ಲಿ ಸ್ಥಳೀಯವಾಗಿ ಬೂತ್‌ ವ್ಯವಸ್ಥೆ ಮಾಡುವ ವಿಶೇಷ ಅಧಿಕಾರ ಇದೆ ಎಂದರು.

220 ಸೂಕ್ಷ್ಮ ಮತಗಟ್ಟೆ
ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಮಾತನಾಡಿ, ಜಿಲ್ಲೆಯಲ್ಲಿ  220 ಸೂಕ್ಷ್ಮ ಮತಗಟ್ಟೆಗಳಿದ್ದು, ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿಯೂ ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.  ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರು ಕುಂದಾಪುರ ಮತ್ತು ಬೈಂದೂರು ಕ್ಷೇತ್ರದ ನಕ್ಸಲ್‌ ಪೀಡಿತ ಪ್ರದೇಶಗಳಾದ ಮಡಾಮಕ್ಕಿ ಗ್ರಾಮದ ಮಾಂಡಿಮೂರುಕೈ, ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಮತ್ತು ಅಮಾಸೆ ಬೈಲು, ಹೊಸಂಗಡಿ, ಹಳ್ಳಿಹೊಳೆ ಗ್ರಾಮದ ಶೆಟ್ಟಿಪಾಲು, ಸುಳುಗೋಡು, ಮುದೂರು ಗ್ರಾಮದ ಉದಯ ನಗರ, ಜಡ್ಕಲ್‌ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಅಹವಾಲು ಸಲ್ಲಿಕೆ
ಹಳ್ಳಿಹೊಳೆ ಗ್ರಾಮದಲ್ಲಿ ಎರಡು ಟವರ್‌ ಇದ್ದರೂ ನೆಟ್‌ವರ್ಕ್‌ ಇಲ್ಲ, ಹಳ್ಳಿಹೊಳೆ ಗ್ರಾಮ ಬೈಂದೂರಿನಿಂದ ಬೇರ್ಪಡಿಸಿ ಕುಂದಾಪುರ ತಾಲೂಕಿಗೆ ಸೇರ್ಪಡೆ, ಗ್ರಾಮಲೆಕ್ಕಿಗರು ಇಲ್ಲದಿರುವುದು, ಅಕ್ರಮ ಕೆಂಪುಕಲ್ಲು ಕೋರೆ, ಕುಡಿಯುವ ನೀರಿನ ಸಮಸ್ಯೆ, ಬೂತ್‌ ವಿಂಗಡಣೆಯಲ್ಲಿ ಲೋಪ, ಮರಳು ಸಿಗದಿರುವ ಬಗ್ಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು. ಡಿವೈಎಸ್‌ಪಿ ದಿನೇಶ್‌ ಕುಮಾರ್‌, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗಾ, ಶಂಕರನಾರಾಯಣ ಪಿಎಸ್‌ಐ ರಾಘವೇಂದ್ರ ಪಿ., ಅಮಾಸೆಬೈಲು ಪಿಎಸ್‌ಐ ಗಳಾದ ಸುಕುಮಾರ ಕೆ., ಪ್ರಕಾಶ ಕುಮಾರ್‌, ಹಳ್ಳಿಹೊಳೆ ಗ್ರಾ. ಪಂ. ಪಿಡಿಒ ಸುದರ್ಶನ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next