ಕಲಬುರಗಿ: ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪ ಇದ್ದರೆ, ಜಿಲ್ಲೆಯಲ್ಲಿ ಶೇ.100ಕ್ಕೆ 100ರಷ್ಟು ಕಮಿಷನ್ ಪಡೆಯುತ್ತಿರುವ ಅನುಮಾನ ಮೂಡುತ್ತಿದೆ. ಖುದ್ದು ಸಂಸದರೇ ಮಾಡದ ಕಾಮಗಾರಿ ಬಿಲ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ ಎಂದು ಕೆಕೆಪಿಸಿ ಅಧ್ಯಕ್ಷ, ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ಮತಕ್ಷೇತ್ರದ ಭೀಮನಳ್ಳಿ ಪಂಚಾಯಿತಿ ವ್ಯಾಪ್ತಿಯ ಬೆಳಗೇರಾ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಮಾಡಲಾರದ ಕೆಲಸಕ್ಕೆ ಬಿಲ್ ಪಾಸ್ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಂಸದರೇ ಸೂಚಿಸಿದ್ದಾರೆ. ಇದು ಅಧಿ ಕಾರದ ದುರಪಯೋಗವಲ್ಲವೇ ಎಂದು ಪ್ರಶ್ನಿಸಿದರು. ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಸದಸ್ಯರಾಗಿದ್ದಾಗ ಎಸ್‌ಪಿಟಿ, ಟಿಎಸ್‌ಪಿ ಯೋಜನೆಯಡಿ ಕೆಬಿಜೆಎನ್‌ಎಲ್ ಅಡಿಯಲ್ಲಿ ಏಳು ಕಾಮಗಾರಿಗಳನ್ನು ತಂದಿದ್ದರು.
66.22 ಲಕ್ಷದಿಂದ 1.79 ಕೋಟಿ ರೂ.ವರೆಗಿನ ಕಾಮಗಾರಿಗಳಾಗಿದ್ದು, ಈಗಾಗಲೇ ಟೆಂಡರ್ ಕರೆದು ತಾಂತ್ರಿಕ ಬಿಡ್ ತೆರೆಯಲಾಗಿದೆ. ಆದರೆ, ಇದಕ್ಕೆ ತಡೆ ನೀಡಿ ಮತ್ತೂಂದು ಬಾರಿ ಟೆಂಡರ್ ಕರೆಯುವಂತೆ ಡಾ|ಉಮೇಶ ಜಾಧವ ಮೌಖೀಕ ಸೂಚನೆ ನೀಡಿದ್ದಾರೆ. ಈ ಕುರಿತಂತೆ ಅ ಧಿಕಾರಿಗಳು ಅಧಿಕೃತವಾಗಿ ಬರೆದ ಪತ್ರದಲ್ಲಿ ಉಲ್ಲೇಖೀಸಿದ್ದು, ಇದನ್ನು ಸಚಿವ ಮುರುಗೇಶ ನಿರಾಣಿ ಗಮನಕ್ಕೆ ತರಲಾಗಿದೆ. ಸಂಸದರು ಯಾಕೆ ಈ ರೀತಿ ಅಡ್ಡಿ ಮಾಡುತ್ತಾರೆ? ಉದ್ದೇಶವೇನು? ಇದು ಅವರು ತಂದಿದ್ದ ಹಣವೇ ಎಂದು ಕಿಡಿಕಾರಿದರು.
ಸಾಂಸ್ಕೃತಿಕ ಸಂಘದ “ರಹಸ್ಯ’: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಪ್ರತ್ಯೇಕವಾಗಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಆದರೆ, ಈಗ ನೋಡಿದರೆ ಕೆಕೆಆರ್‌ಡಿಬಿ ಹಣದಲ್ಲೇ ಒಂದು ಭಾಗ ಕೊಡುತ್ತಿದ್ದಾರೆ. ಇದು 371 (ಜೆ) ಕಲಂನ ಉಲ್ಲಂಘನೆಯಾಗಲಿದ್ದು, ಇದನ್ನು ಸದನದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಇದಕ್ಕೆ ಕಾರಣರಾದ ಅಧಿ ಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಸಾಂಸ್ಕೃತಿಕ ಸಂಘವು ಸರ್ಕಾರದ ವಿವಿಧ ಇಲಾಖೆಗಳು ಕೈಗೊಳ್ಳದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ, ಫಲಾನುಭವಿಗಳಿಗೆ ಹಸು ವಿತರಣೆ, ಗೋಶಾಲೆ, ವಿವಿಧೆಡೆ ಸಮುದಾಯ ಭವನ ನಿರ್ಮಾಣ, ಡಿಜಿಟಲ್ ಕ್ಲಾಸ್‌ನಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಸಂಘದ ಕಚೇರಿ ಹಾಗೂ ಸಭಾಂಗಣಕ್ಕಾಗಿ ಒಂದೂವರೆ ಕೋಟಿ ರೂ.ಗೂ ಅ ಧಿಕ ವೆಚ್ಚ ಮಾಡಲಾಗುತ್ತಿದೆ. ಈ ನಿಯಮಾವಳಿಗಳನ್ನು ಮೀರಿ ಹಣ ಖರ್ಚು ಮಾಡುತ್ತಿರುವ ಬಗ್ಗೆ ಯೋಜನಾ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ. ಫಲಾನುಭವಿಗಳ ಪಟ್ಟಿಯ ಬಗ್ಗೆ ಸ್ಪಷ್ಟತೆ ಇಲ್ಲದೇ ಹಣವನ್ನು ಖರ್ಚು ಮಾಡಲಾಗುತ್ತಿದೆ. ಹೀಗೆ ಹಣ ಮಾಡುವಾಗ ಅಧಿಕಾರಿಗಳು ಏನು ಮಾಡುತ್ತಿದ್ದರು?. ಕೆಕೆಆರ್‌ಡಿಬಿಗೆ ಸರಿಯಾಗಿ ಹಣ ಬಿಡುಗಡೆಯಾಗದ ಸಂದರ್ಭ ಸಂಘಕ್ಕೆ ಕಟ್ಟಡ ಕಟ್ಟುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು. ಮುಖಂಡ ಸುಭಾಷ ರಾಠೊಡ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ರಸ್ತೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಡಾಂಬರು ಇರುವ ರಸ್ತೆ ಮೇಲೆ ಮುರಮ್ ಹಾಕಿರುವುದಾಗಿ ಹೇಳಿ ಕೋಟಿಗಟ್ಟಲೇ ಲೂಟಿ ಮಾಡಲಾಗಿದೆ. ಐನಾಪುರದಿಂದ ಬಿಕ್ಕುನಾಯಕ ತಾಂಡಾವರೆಗೆ ಡಾಂಬರು ರಸ್ತೆ ಮೇಲೆ ಮುರುಮ್ ಹಾಕಿರುವುದಾಗಿ 3.50 ಕೋಟಿ ರೂ. ಎತ್ತಲಾಗಿದೆ. ಈ ಕುರಿತು ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಹೇಳಿದರು. ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಚೇತನ್ ಗೋನಾಯಕ, ಶಿವಾನಂದ ಪಾಟೀಲ, ಈರಣ್ಣ ಝಳಕಿ ಇದ್ದರು.