ಹೊಸದಿಲ್ಲಿ : ಕಠುವಾ ಮತ್ತು ಉನ್ನಾವ್‌ನಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವನ್ನು ಪ್ರತಿಭಟಿಸಿ ನಿನ್ನೆ ಮಧ್ಯರಾತ್ರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಮೋಂಬತ್ತಿ ಪ್ರತಿಭಟನೆ ಜಾಥಾದಲ್ಲಿ ರಾಹುಲ್ ಸಹೋದರಿ ಪ್ರಿಯಾಂಕಾ ವಾದ್ರಾ ಅವರು ಜನಜಂಗುಳಿಯಲ್ಲಿ ತಳ್ಳಲ್ಪಟ್ಟು ವಸ್ತುತಃ ಹಲ್ಲೆಯಂತಹ ಸ್ಥಿತಿಗೆ ಗುರಿಯಾಗಿರುವುದು ವರದಿಯಾಗಿದೆ.
ಜನಜಂಗುಳಿಯ ಈ ದುರ್ವರ್ತನೆಯಿಂದ ಸಿಟ್ಟಿಗೆದ್ದ ಪ್ರಿಯಾಂಕಾ “ನಾವು ಯಾವ ಕಾರಣಕ್ಕಾಗಿ ಇಲ್ಲಿ ಸೇರಿದ್ದೇವೆ ಎಂಬುದನ್ನಾದರೂ ನೆನಪಿಟ್ಟು ಕೊಂಡು ಸಂಯಮದಿಂದ ವರ್ತಿಸಿ’ ಎಂದು ಧ್ವನಿ ಎತ್ತರಿಸಿ ಹೇಳಿದರೆಂದು ವರದಿಯಾಗಿದೆ.
“ಹೀಗೆ ಈ ರೀತಿ ತಳ್ಳಾಡುವವರು ತಮ್ಮ ಮನೆಗೆ ಹೋಗಬೇಕು. ಸ್ವಲ್ಪ ಸಂಯಮದಿಂದ ನಡೆದುಕೊಳ್ಳಿ; ಮೌನವಾಗಿ ಸಾಗಿ’ ಎಂದು ಪ್ರಿಯಾಂಕಾ ಸಿಟ್ಟಿನಿಂದ ಜನಜಂಗುಳಿಯನ್ನು ಗುರುಗುಟ್ಟಿ ಗುಡುಗಿದರು ಎಂದು ವರದಿಗಳು ತಿಳಿಸಿವೆ.
ಇಂಡಿಯಾ ಗೇಟ್ ವರೆಗಿನ ಜಾಥಾದಲ್ಲಿ ಪ್ರಿಯಾಂಕಾ ಜತೆಗೆ ಅವರ ಪತಿ ರಾಬರ್ಟ್ ವಾದ್ರಾ ಅವರು ಕೂಡ ಇದ್ದರು. ಜನಜಂಗುಳಿಯ ತಳ್ಳಾಟದಿಂದ ಸಿಟ್ಟಿ ಗೆದ್ದ ವಾದ್ರಾ “ದೇಶದಲ್ಲಿ ಮಹಿಳೆಯರು ತಾವು ಸುರಕ್ಷಿತರೆಂದು ತಿಳಿಯಲು ಬದಲಾವಣೆ ಉಂಟಾಗಬೇಕಾದ ಅಗತ್ಯವಿದೆ’ ಎಂದು ಗುಡುಗಿದರು.
ಉತ್ತರ ಪ್ರದೇಶ ಉನ್ನಾವ್ ರೇಪ್ ಪ್ರಕರಣ ಮತ್ತು ಜಮ್ಮು ಕಾಶ್ಮೀರದ ಕಠುವಾ ರೇಪ್ ಪ್ರಕರಣವನ್ನು ಪ್ರತಿಭಟಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಿನ್ನೆ ಮಧ್ಯ ರಾತ್ರಿ ನಡೆದಿದ್ದ ಕ್ಯಾಂಡಲ್ ಲೈಟ್ ಮಾರ್ಚ್ ನಲ್ಲಿ ಭಾರೀ ಸಂಖ್ಯೆ ಜನರು ಸೇರಿದ್ದರು.