ಹೊಸದಿಲ್ಲಿ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವದಲ್ಲಿ ಶೀಘ್ರವೇ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪಕ್ಷದ ನೂತನ ಕಾರ್ಯಾಧ್ಯಕ್ಷೆಯಾಗಿ ನೇಮಿಸಲಾಗುವುದೆಂಬ ಸುಳಿವು ನೀಡಿದ್ದರು.
ಕಳೆದ ಆಗಸ್ಟ್ 8ರಂದು ಪಕ್ಷದ ಕಾರ್ಯಕಾರಿಣಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆಯನ್ನು ಚರ್ಚಿಸಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ಮಾತನಾಡುತ್ತಾ ಪಕ್ಷದ ಉನ್ನತ ನಾಯಕತ್ವದಲ್ಲಿ ಬದಲಾವಣೆ ತರುವ ಸುಳಿವನ್ನು ನೀಡಿದ್ದರು.
ಇನ್ನೊಂದು ತಿಂಗಳ ಒಳಗಾಗಿ ಈ ಬಗ್ಗೆ ಕಾಂಗ್ರೆಸ್ ಪಕ್ಷ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಈಗ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಪಕ್ಷದ ಉನ್ನತ ನಾಯಕತ್ವದಲ್ಲಿ ಬದಲಾವಣೆಯನ್ನು ತರುವ ಸೋನಿಯಾ ಗಾಂಧಿ ಅವರ ಸಲಹೆಗೆ ಹಿರಿಯ ನಾಯಕರಲ್ಲಿ ಬಲವಾದ ಬೆಂಬಲ ವ್ಯಕ್ತವಾಗಿದೆ ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಪ್ರಿಯಾಂಕಾ ವಾದ್ರಾಗೆ ಉನ್ನತ ನಾಯಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಡಬೇಕು ಎಂಬ ಮಾತುಗಳು ಪಕ್ಷದ ವಿವಿಧ ಸ್ತರಗಳಲ್ಲಿ ಕೇಳಿ ಬರುತ್ತಿದ್ದವು. ಅಂತಹ ಒಂದು ಅಭಿಲಾಷೆ ನನಸಾಗುವ ಕಾಲ ಈಗ ಕೂಡಿ ಬರುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.