Advertisement

ತವರೂರಲ್ಲಿ ಪ್ರಿಯಾಂಕಾ

08:44 PM Oct 16, 2017 | |

ನಿಮಗೆ ಪ್ರಿಯಾಂಕ ಉಪೇಂದ್ರ ಅವರು ಅಭಿನಯಿಸುತ್ತಿರುವ “ಹೌರಾ ಬ್ರಿಡ್ಜ್’ ಸಿನಿಮಾ ಶುರುವಾಗಿದ್ದು ಗೊತ್ತಿರಬಹುದು. ದೂರದ ಕೊಲ್ಕತ್ತಾದಲ್ಲಿ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ನಿರ್ದೇಶಕ ಲೋಹಿತ್‌ ಅವರು ಶೇ.40 ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೇ “ಹೌರಾ ಬ್ರಿಡ್ಜ್’ ಚಿತ್ರತಂಡ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ವಿಶೇಷವೆಂದರೆ, ಕೊಲ್ಕತ್ತಾದಿಂದ “ಹೌರಾ ಬ್ರಿಡ್ಜ್’ ಚಿತ್ರೀಕರಣದ ಸೆಟ್‌ನಿಂದ ಒಂದಷ್ಟು ಫೋಟೋಗಳು ಬಂದಿವೆ. ಆ ಫೋಟೋಗಳ ಜೊತೆಗೊಂದು ವಿಶೇಷ ಮಾಹಿತಿಯೂ ಇಲ್ಲಿದೆ.


ನಾರ್ತ್‌ ಕೊಲ್ಕತ್ತಾ ಎಂದೇ ಕರೆಯುವ ಜಾಗದಲ್ಲಿ ಬಹುತೇಕ ಚಿತ್ರೀಕರಣ ಮಾಡಿದ್ದಾರಂತೆ ಲೋಹಿತ್‌. ಅದರಲ್ಲೂ ಅವರು ಸೌತ್‌ ಪಾರ್ಕ್‌ ಸಿಮೆಟ್ರಿ ಎಂಬ ಸ್ಥಳದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಅದರ ವಿಶೇಷವೆಂದರೆ, ಇದುವರೆಗೆ ಅಲ್ಲಿ ಎರಡು ಸಿನಿಮಾಗಳು ಮಾತ್ರ ಚಿತ್ರೀಕರಣಗೊಂಡಿವೆ. ಅದು ಬಿಟ್ಟರೆ, ದಕ್ಷಿಣ ಭಾರತದಲ್ಲಿ ಅದರಲ್ಲೂ ಕನ್ನಡದ “ಹೌರಾ ಬ್ರಿಡ್ಜ್’ ಚಿತ್ರ ಮೊದಲನೆಯದು ಎಂಬುದು ಹೆಗ್ಗಳಿಕೆ. ಸೌತ್‌ ಪಾರ್ಕ್‌ ಸಿಮೆಟ್ರಿ ನೂರು ವರ್ಷದಷ್ಟು ಹಳೆಯದು. 1970ರಲ್ಲೇ ಅದನ್ನು ಮುಚ್ಚಲಾಗಿತ್ತು. ಆಗ ಬ್ರಿಟಿಷರ ಆಳ್ವಿಕೆ ಇದ್ದಾಗ, ದೊಡ್ಡ ದೊಡ್ಡ ವ್ಯಕ್ತಿಗಳನ್ನು ಆ ಸ್ಥಳದಲ್ಲಿ ಸಮಾಧಿ ಮಾಡಲಾಗುತ್ತಿತ್ತು. ಕಳೆದ 45 ವರ್ಷಗಳಿಂದಲೂ ಆ ಪಾರ್ಕ್‌ ಮುಚ್ಚಿದೆ. ಆ ಸ್ಥಳದಲ್ಲಿ ಸತ್ಯಜಿತ್‌ ರೇ ಅವರ ಪುತ್ರನ ಸಿನಿಮಾ, ಅಮಿತಾಭ್‌ ಬಚ್ಚನ್‌ ಅವರ ಒಂದು ಚಿತ್ರಕ್ಕೆ ಚಿತ್ರೀಕರಣ ಮಾಡಲು ಅವಕಾಶ ಕೊಟ್ಟಿದ್ದು ಬಿಟ್ಟರೆ, ಬೇರೆ ಯಾವ ಸಿನಿಮಾಗೂ ಅವಕಾಶ ಕೊಟ್ಟಿರಲಿಲ್ಲವಂತೆ. ಈಗ ದಕ್ಷಿಣ ಭಾರತದಲ್ಲೇ ಕನ್ನಡದ “ಹೌರಾ ಬ್ರಿಡ್ಜ್’ ಮೊದಲ ಚಿತ್ರ ಅಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂದು ವಿವರ ಕೊಡುತ್ತಾರೆ ಲೋಹಿತ್‌.


ಅಂದಹಾಗೆ, ಈಗಾಗಲೇ ಶೇ.40 ರಷ್ಟು ಚಿತ್ರೀಕರಣಗೊಂಡಿದ್ದು, ಒಂದಷ್ಟು ಚೇಸಿಂಗ್‌ ಹಾಗೂ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಪ್ರಿಯಾಂಕ ಉಪೇಂದ್ರ ಅವರಿಲ್ಲಿ ಎನ್‌ಜಿಓ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಮೇಡಮ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮಳೆಯ ಎಫೆಕ್ಟ್‌ನಲ್ಲಿ ಸುಮಾರು 300ಕ್ಕೂ ಹೆಚ್ಚು ಜೂನಿಯರ್ ಇಟ್ಟುಕೊಂಡು ಚಿತ್ರೀಕರಿಸಲಾಗಿದೆ. ರಾಮ್‌ಗೊàಪಾಲ್‌ ವರ್ಮ ಅವರ ಚಿತ್ರವೊಂದರಲ್ಲಿ ಕಸಬ್‌ ಪಾತ್ರ ನಿರ್ವಹಿಸಿದ್ದ ನಟ ಸಂಜೀವ್‌ ಅವರು ಪ್ರಿಯಾಂಕ ಉಪೇಂದ್ರ ಅವರ ಕಾಂಬಿನೇಷನ್‌ನಲ್ಲಿ ನಟಿಸುತ್ತಿದ್ದಾರೆ.

Advertisement

ಅದೇನೆ ಇರಲಿ, “ಹೌರಾ ಬ್ರಿಡ್ಜ್’ ಸದ್ದಿಲ್ಲದೆಯೇ ಜೋರಾಗಿ ಚಿತ್ರೀಕರಣ ಮಾಡುತ್ತಿದೆ. ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಮಗಳು ಐಶ್ವರ್ಯ ಕೂಡ ನಟಿಸುತ್ತಿದ್ದು, ಈ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಒಂಭತ್ತು ವರ್ಷದ ಐಶ್ವರ್ಯ ಅವರಿಗೆ ಇಲ್ಲೊಂದು ವಿಶೇಷ ಪಾತ್ರವಿದೆ. ಅಂದಹಾಗೆ, ಇಲ್ಲಿ ತಾಯಿ-ಮಗಳು ಇಬ್ಬರೂ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರಾ? ಇದಕ್ಕೆ ಉತ್ತರಿಸುವ ಲೋಹಿತ್‌, ಕಾಂಬಿನೇಷನ್‌ ಬಗ್ಗೆ ಹೇಳುವುದಿಲ್ಲ. ಆದರೆ, ಇಬ್ಬರದೂ ಇಲ್ಲಿ ಮೇಜರ್‌ ಪಾತ್ರ ಎಂಬುದಷ್ಟೇ ನಿಜ ಎನ್ನುತ್ತಾರೆ. ಇದು ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಶುರುವಾಗುತ್ತಿದೆ. ಕನ್ನಡದಲ್ಲಿ ಭಾಸ್ಕರ್‌ ಮತ್ತು ಪ್ರಸಾದ್‌ ರಾವ್‌ ನಿರ್ಮಾಣದ ಉಸ್ತುವಾರಿ ವಹಿಸಿದರೆ, ತಮಿಳು ಭಾಷೆಯಲ್ಲಿ ತಯಾರಾಗುವ ಚಿತ್ರಕ್ಕೆ ಜಿಎಸ್‌ಕೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ಚಿತ್ರಕ್ಕೆ ಎಚ್‌.ಸಿ. ವೇಣು ಕ್ಯಾಮೆರಾ ಹಿಡಿದರೆ, ನೊಬಿನ್‌ ಪಾಲ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next