ವಾಡಿ: ಮತದಾನ ಕೇಂದ್ರದ ಅಧಿಕಾರಿಯೊಬ್ಬ ವೃದ್ಧ ಮತದಾರರಿಗೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿಯ ಬಟನ್ ಒತ್ತಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಚಿತ್ತಾಪುರ ಮತಕ್ಷೇತ್ರದ ಚಾಮನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಚಾಮನೂರು ಮತದಾನ ಕೇಂದ್ರದ ಚುನಾವಣಾ ಸಿಬ್ಬಂದಿ ಬಿ.ಸಿ ಚೌಹಾಣ್ ಚುನಾವಣಾ ನಿಯಮ ಉಲ್ಲಂಘಿಸಿದ್ದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಕಣ್ಣಿನ ದೃಷ್ಟಿ ಇಲ್ಲದ ವಯೋವೃದ್ಧ ಮತದಾರರ ಸಹಾಯಕ್ಕೆ ನಿಂತ ಅಧಿಕಾರಿ ಬಿ.ಸಿ.ಚೌಹಾಣ್ ಬಿಜೆಪಿ ಪರ ಮತದಾನಕ್ಕೆ ಸಹಕರಿಸುತ್ತಿದ್ದ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ಮಹಿಮು ಸಾಹೇಬ್, ಮುಖಂಡ ಭಗವಾನ್ ಎಂಟಮನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬದ್ಧವಾಗಿ ಚುನಾವಣೆ ನಡೆಸಿ ಪ್ರಜಾಪ್ರಭುತ್ವದ ನಿಯಮ ಅನುಸರಿಸಿರಿ. ಓರ್ವ ಶಿಕ್ಷಕರಾಗಿ ಒಂದು ಪಕ್ಷದ ಪರವಾಗಿ ವಕಾಲತ್ತು ವಹಿಸುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಚುನಾವಣಾ ಸಿಬ್ಬಂದಿಯನ್ನು ಬದಲಿಸುವವರೆಗೂ ಮತದಾನ ಪ್ರಕ್ರಿಯ ನಡೆಸಬಾರದೆಂದು ಒತ್ತಾಯಿಸಿದರು. ತಕ್ಷಣ ಪೊಲೀಸರು ಬಿ.ಸಿ ಚೌಹಾಣ್ ಅವರನ್ನು ಬದಲಿಸಿ ಬೇರೊಬ್ಬ ಸಿಬ್ಬಂದಿಯನ್ನು ನೇಮಿಸಿದ ನಂತರ ಮತದಾನ ಪ್ರಕ್ರಿಯೆ ಆರಂಭಗೊಂಡಿತು.