ವಾಡಿ: ಎಲೆಕ್ಷನ್‌ದಲ್ಲಿ ನಾನು ಸೋತ್ರೂ ಪರ್ವಾಗಿಲ್ಲ ನನ್ನ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ ನಡೆಯಲು ಬಿಡುವುದಿಲ್ಲ. ಅಕ್ರಮ ಮರಳು ಸಾಗಾಣಿಕೆ ಯಾರೇ ಮಾಡಲಿ ಅವರಿಗೆ ಜೈಲಿಗೆ ಹಾಕಿಸ್ತೀನಿ. ಇಲ್ಲಿ ಜನ ಕೋವಿಡ್ ಅಂತ ಸಾಯ್ತಾಯಿದ್ರೆ, ನೀವು ಮರಳು ಹೊಡಿತೀನಿ ಅವಕಾಶ ಕೊಡಿ ಅಂತ ನನಗೆ ಕಾಲ್ ಮಾಡ್ತೀರಾ? ಅಕ್ರಮ ಕೆಲಸಕ್ಕೆ ಹತ್ತು ಸಲ ಫೋನ್ ಮಾಡ್ತೀರಾ? ವೋಟ್ ಹಾಕಲ್ಲ ಅಂತ ಹೆದ್ರಸ್ತೀರಾ? ನಿಮ್ಮ ವೋಟೂ ಬೇಡ ಏನೂ ಬೇಡ. ಅದ್ಹೇಗೆ ನೀವು ಅಕ್ರಮವಾಗಿ ರೇತಿ (ಮರಳು) ಹೊಡಿತೀರಿ ನಾನೂ ನೋಡ್ತೀನಿ.
ಹೀಗೆ ಅಕ್ರಮ ದಂಧೆಗೆ ಅವಕಾಶ ಕೋರಿ ದೂರವಾಣಿ ಕರೆ ಮಾಡಿದ್ದ ಶಹಾಬಾದ ತಾಲೂಕಿನ ಹೊನಗುಂಟಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಖಡಕ್ ಎಚ್ಚರಿಕೆ ಕೊಡುವ ಮೂಲಕ ಸುದ್ದಿಯಾಗಿರುವ ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ. ರಾಜಕೀಯ ವಿರೋಧಿಗಳಿಗೂ ತಮ್ಮ ರಾಜಕೀಯ ಧೋರಣೆ ಅರ್ಥ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಶಾಸಕ ಖರ್ಗೆ ಮತ್ತು ಅಕ್ರಮ ಮರಳು ದಂಧೆಕೋರನ ಮಧ್ಯೆ ನಡೆದ ಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕರ ಈ ದೃಢ ನಿರ್ಧಾರ ಜಿಲ್ಲೆಯ ಜನರ ಪ್ರಸಂಶೆಗೆ ಪಾತ್ರವಾಗಿದೆ.
ಹೊನಗುಂಟಿ ಗ್ರಾಮದ ವ್ಯಕ್ತಿ ಶಾಸಕರಿಗೆ ಕರೆ ಮಾಡಿ, ಸರ್ ನನಗೆ ಬೇರೆ ಕೆಲಸ ಇಲ್ಲ. ಕಳೆದ ಹತ್ತಾರು ವರ್ಷಗಳಿಂದ ಅಕ್ರಮವಾಗಿ ಮರಳು ಸಾಗಿಸುತ್ತ ಬದುಕುತ್ತಿದ್ದೇನೆ. ಈಗ ಪೊಲೀಸರು ಮರಳು ಸಾಗಣಿಕೆಗೆ ಅವಕಾಶ ನೀಡುತ್ತಿಲ್ಲ. ನೀವು ಒಂದು ಮಾತು ಹೇಳಿದರೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತೇನೆ. ಸರ್ಕಲ್ ಇನ್ಸ್‌ಪೆಕ್ಟರ್ ಸಾಹೇಬರಿಗೆ ನೀವೊಂದು ಮಾತು ಹೇಳಿ ಸರ್ ಎಂದದ್ದೇ ಶಾಸಕ ಖರ್ಗೆ ಆಕ್ರೋಶಕ್ಕೆ ಕಾರಣವಾಗಿದ್ದು, ಫೋನಿನಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಅಕ್ರಮ ಮರಳು ಸಾಗಾಣಿಕೆ ತಡೆಯುವಂತೆ ನಾನೇ ಹೇಳಿದ್ದೀನಿ. ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದಕ್ಕೆ ಶಾಸಕರೇ ಕಾರಣ ಎಂದು ಪತ್ರಿಕೆಗಳಲ್ಲಿ ನನ್ನ ಹೆಸರು ಬರ್ತಿದೆ. ನನ್ನ ಹೆಸರು ಹಾಳಾದ್ರೂ ಪರ್ವಾಗಿಲ್ಲ, ನೀವು ಮಾತ್ರ ರೇತಿ (ಮರಳು) ಹೊಡಿತೀರಾ? ಇಂತಹ ಕೆಲ್ಸಾ ಮಾಡೋಕೆ ನಿಮ್ಗೆ ನಾಚ್ಕೆಯಾಗೊಲ್ವಾ? ರೇತಿ ಹೊಡೆಯಲು ಅವಕಾಶ ಕೊಡದಿದ್ರೆ ವೋಟ್ ಹಾಕಲ್ಲ ಅಂತ ಬೇರೆ ಹೆದ್ರಸ್ತೀರೇನು? ನನಗೆ ನಿಮ್ಮ ವೋಟು ಬೇಡ ಏನೂ ಬೇಡ. ನಾನು ಮಾತ್ರ ಅಕ್ರಮ ಮರಳು ದಂಧಗೆ ಸಹಕಾರ ನೀಡೋದಿಲ್ಲ. ರೇತಿ ಹೊಡೆದರೆ ಜೈಲಿಗೆ ಹಾಕಿಸ್ತೀನಿ ಎಂದು ಶಾಸಕ ಪ್ರಿಯಾಂಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರು ಮತ್ತು ಮರಳು ದಂಧೆಕೋರನ ನಡುವೆ ನಡೆದ ಮೊಬೈಲ್ ಮಾತುಕತೆಯ ಆಡಿಯೋ ಹೇಗೆ ಹೊರಗಡೆ ಬಂದಿದೆಯೋ ಗೊತ್ತಿಲ್ಲ. ಎಲ್ಲೆಡೆ ಶಾಸಕ ಖರ್ಗೆ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.