ಪ್ರಿಯಾಮಣಿ ಅಭಿನಯದ “ಡಾ.56′ ಚಿತ್ರಕ್ಕೆ ಇತ್ತೀಚೆಗೆ ಚಾಲನೆ ಸಿಕ್ಕಿದೆ. ಚಿತ್ರೀಕರಣವೂ ಶುರುವಾಗಿದೆ. ಆ ಚಿತ್ರದ ಬಗ್ಗೆ ಹೇಳಲೆಂದೇ ನಿರ್ದೇಶಕ ರಾಜಿ ಆನಂದಲೀಲಾ ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಕುಳಿತಿದ್ದರು. ಮೊದಲು ಮಾತು ಶುರುಮಾಡಿದ್ದು ನಿರ್ದೇಶಕರು. ಇದೊಂದು ಸೈನ್ಸ್ ಫಿಕ್ಷನ್ ಮರ್ಡರ್ ಮಿಸ್ಟ್ರಿ. 1956 ರಿಂದ 2019 ರವರೆಗೆ ನಡೆಯುತ್ತಿರುವ ಘಟನೆ ಸುತ್ತ ಸಾಗುವ ಚಿತ್ರ. ಆದರೆ, ಆ ಘಟನೆ ಏನೆಂಬುದು ಸಸ್ಪೆನ್ಸ್. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದೆ. ಎರಡು ಹಾಡು, ಒಂದು ಫೈಟ್ ಇದೆ. ಪ್ರಿಯಾಮಣಿ ಅವರಿಲ್ಲಿ ಸಿಬಿಐ ಅಧಿಕಾರಿ ಪಾತ್ರ ಮಾಡುತ್ತಿದ್ದಾರೆ. ಇದು ಎಂಟರ್‌ಟೈನ್‌ಮೆಂಟ್‌ಗಲ್ಲ. ಭವಿಷ್ಯಕ್ಕೂತಿಳಿದುಕೊಳ್ಳುವಂತಹ ಅಂಶ ಹೊಂದಿದೆ. ಅದನ್ನು ಚಿತ್ರದಲ್ಲೇ ನೋಡಬೇಕು’ ಎಂಬುದು ನಿರ್ದೇಶಕರ ಮಾತು.
ನಾಯಕ ಪ್ರವೀಣ್ ಚಿತ್ರಕ್ಕೆ ಕಥೆ, ಚಿತ್ರಕಥೆ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಕಥೆಯ ಗುಟ್ಟು ಬಿಟ್ಟುಕೊಡದೆ, ಇದೊಂದು ಮರ್ಡರ್ ಮಿಸ್ಟ್ರಿ ಕಥೆ ಎನ್ನುತ್ತಲೇ, “56 ಅನ್ನೋದೇ ಸಿನಿಮಾ. ಪ್ರತಿ 56 ಸೆಕೆಂಡ್‌ಗೆ ನಾಯಕ ತನ್ನ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುತ್ತಾನೆ. ಅದನ್ನು ಹೇಗೆ ಎದುರಿಸುತ್ತಾನೆ, ಮತ್ತೆ ಯಾಕೆ ಅನ್ನೋದೇ ಗುಟ್ಟು. ಇನ್ನು, ಇದು ನನ್ನ ಎರಡನೇ ಚಿತ್ರ. ನಿರ್ಮಾಣದ ಮೊದಲ ಚಿತ್ರ. ಎಲ್ಲರ ಸಹಕಾರ ಇರಲಿ’ ಎಂದರು ಪ್ರವೀಣ್.
ನಾಯಕಿ ಪ್ರಿಯಾಮಣಿ ಅವರಿಗೆ ಈ ಕಥೆ ಕೇಳಿದಾಗ, ನಂಬಿಕೆ ಬಂತಂತೆ. ಆರಂಭದಲ್ಲಿ ಅರ್ಧಗಂಟೆಯಲ್ಲಿ ಒನ್‌ಲೈನ್ ಹೇಳಿ ಅಂತ ಕಥೆ ಕೇಳಲು ಕುಳಿತ ಪ್ರಿಯಾಮಣಿ, ನಿರ್ದೇಶಕರು ಹೇಳುವ ಕಥೆಯನ್ನು ಕೇಳುತ್ತಲೇ ಸುಮಾರು ಒಂದುವರೆ ತಾಸಿನವರೆಗೂ ಕಥೆ ಕೇಳಿ ಥ್ರಿಲ್ ಆದರಂತೆ. “ಇದು ಕನ್ನಡದಲ್ಲಿ ಈಗ ಬರುತ್ತಿರುವ ಹೊಸತನದ ಚಿತ್ರಗಳ ಸಾಲಿಗೆ ಸೇರಲಿದೆ. ರಿಯಾಲಿಟಿಗೆ ತುಂಬಾ ಹತ್ತಿರವಾಗುವಂತಹ ಚಿತ್ರವಿದು. ನಾನಿಲ್ಲಿ ತನಿಖಾಧಿಕಾರಿಯಾಗಿ ನಟಿಸುತ್ತಿರುವುದು ಖುಷಿ ಇದೆ’ ಎಂದರು ಪ್ರಿಯಾಮಣಿ.
ಚಿತ್ರಕ್ಕೆ ನೊಬಿನ್ ಪಾಲ್ ಸಂಗೀತ ನೀಡುತ್ತಿದ್ದು, ಅವರಿಗಿಲ್ಲಿ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಅವಕಾಶ ಸಿಕ್ಕಿದೆಯಂತೆ. ಅದರಲ್ಲೂ ಕಥೆಗೆ ಪೂರಕವಾಗಿರುವ ಎರಡು ಹಾಡುಗಳನ್ನು ಕೊಟ್ಟಿದ್ದಾರಂತೆ. ಛಾಯಾಗ್ರಾಹಕ ರಾಕೇಶ್ ಸಿ. ತಿಲಕ್‌ಗೂ ಇದು ಚಾಲೆಂಜ್ ಸಿನಿಮಾವಂತೆ. ಉಳಿದಂತೆ ಚಿತ್ರದಲ್ಲಿ ಪ್ರಣವ್, ಶ್ರೀಕಾಂತ್ ಇತರರು ಕೆಲಸ ಮಾಡುತ್ತಿದ್ದಾರೆ.
ವಿಜಯ್ ಭರಮಸಾಗರ