ರಾಮ್‌ಪ್ರಿಯಾ ಮತ್ತೆ ಬಂದಿದ್ದಾರೆ! ಅರೇ, ಯಾರಪ್ಪಾ ಇದು ರಾಮ್‌ಪ್ರಿಯಾ ಎಂಬ ಪ್ರಶ್ನೆ ಎದುರಾಗುವುದು ಸಹಜ. ಈ ರಾಮ್‌ಪ್ರಿಯಾ ಬೇರಾರೂ ಅಲ್ಲ, “ಬಿಂದಾಸ್ ಹುಡುಗಿ’ ಅಲಿಯಾಸ್ ಪ್ರಿಯಾ ಹಾಸನ್. ಹೌದು, ಪ್ರಿಯಾ ಈಗ “ಹಾಸನ್’ ಹೆಸರು ತೆಗೆದು ಹಾಕಿ, ಪ್ರಿಯಾ ಹೆಸರ ಮುಂದೆ ಪತಿ ಹೆಸರು “ರಾಮ್’ ಎಂದು ಸೇರಿಸಿಕೊಂಡಿದ್ದಾರೆ. ಇದಷ್ಟೇ ವಿಷಯ ಆಗಿದ್ದರೆ, ಹೇಳುತ್ತಿರಲಿಲ್ಲ. ಹೊಸ ಸುದ್ದಿ ಅಂದರೆ, ರಾಮ್‌ಪ್ರಿಯಾ ಈಗ ಹೊಸ ಸಿನಿಮಾ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಹೊಸ ಚಿತ್ರಕ್ಕೆ ಇಟ್ಟುಕೊಂಡಿರುವ ಹೆಸರು “ರಣಚತುರೆ’.
ಹೌದು, “ಸ್ಮಗ್ಲರ್’ ಬಳಿಕ ರಾಮ್‌ಪ್ರಿಯಾ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಅವರ ಬ್ಯಾನರ್‌ನಲ್ಲೇ ನಿರ್ಮಾಣವಾಗುತ್ತಿರುವ ಚಿತ್ರವಿದು. ಹೆಸರೇ ಹೇಳುವಂತೆ, ಇದೊಂದು ಪಕ್ಕಾ ಔಟ್ ಅಂಡ್ ಔಟ್ ಆ್ಯಕ್ಷನ್ ಚಿತ್ರ. “ಬಿಂದಾಸ್ ಹುಡುಗಿ’ ಚಿತ್ರದಲ್ಲಿ ಕೇವಲ ಹತ್ತು ನಿಮಿಷಗಳ ಕಾಲ ಕಾಣಬರುವ ದೃಶ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು ರಾಮ್‌ಪ್ರಿಯಾ. ಈಗ “ರಣಚತುರೆ’ ಚಿತ್ರದಲ್ಲಿ ಮೊದಲ ಸಲ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.
ರಾಮ್‌ಪ್ರಿಯಾ ಸಿನಿಮಾ ಅಂದಮೇಲೆ ಅಲ್ಲಿ ದಂಡಂ ದಶಗುಣಂ ಇದ್ದೇ ಇರುತ್ತೆ. ವ್ಯವಸ್ಥೆ ವಿರುದ್ಧ, ಭ್ರಷ್ಟತೆಯ ವಿರುದ್ಧ ಹೋರಾಡುವಂತಹ ಅಧಿಕಾರಿಯಾಗಿ ಅವರು ತೆರೆಯ ಮೇಲೆ ಮಿಂಚಲಿದ್ದಾರೆ. ಸಮಾಜದಲ್ಲಿ ಇಂದಿಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ ಖಂಡಿಸುವ ಕೆಲಸ ಆಗುತ್ತಿಲ್ಲ. ಧ್ವನಿ ಕಳೆದುಕೊಂಡವರ ಪರ ನಿಂತು ಹೋರಾಡುವ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರಂತೆ ರಾಮ್‌ಪ್ರಿಯಾ.
ಹಾಗೆ ನೋಡಿದರೆ, ರಾಮ್‌ಪ್ರಿಯಾ ಅವರು “ಸ್ಮಗ್ಲರ್’ ಬಳಿಕ ಎರಡು ಚಿತ್ರಗಳಲ್ಲಿ ನಟಿಸಬೇಕಿತ್ತಂತೆ. ಆದರೆ, ಹಲವು ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ಈಗ ಪಕ್ಕಾ ಪ್ಲಾನಿಂಗ್ ಮಾಡಿಕೊಂಡು ಬಂದಿರುವ ರಾಮ್‌ಪ್ರಿಯಾ, ಇನ್ನು ಮುಂದೆ ಬ್ಯಾಕ್ ಟು ಬ್ಯಾಕ್ ಚಿತ್ರ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರಂತೆ. ಚಿತ್ರದಲ್ಲಿ ಭರ್ಜರಿಯಾಗಿರುವ ಆರು ಫೈಟ್‌ಗಳಿದ್ದು, ಐದು ಸಾಹಸಗಳಿಗೆ ಕೌರವ ವೆಂಕಟೇಶ್ ಸಂಯೋಜನೆ ಮಾಡಿದರೆ, ರಾಜೇಶ್ ಖನ್ನಾ ಅವರು ಒಂದು ಫೈಟ್ ಸಂಯೋಜಿಸುತ್ತಿದ್ದಾರೆ.
ರವಿ ಜೈ ಎಂಬ ಹೊಸ ಪ್ರತಿಭೆ ಸಂಗೀತ ನೀಡುತ್ತಿದ್ದು, ಎರಡು ಹಾಡುಗಳಷ್ಟೇ ಚಿತ್ರದಲ್ಲಿರಲಿವೆ. ಇಲ್ಲಿ ನಾಲ್ಕು ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿದ್ದಾರೆ ಅವರು. ಇನ್ನುಳಿದಂತೆ ಮನೋಹರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯ್ ನಿತೇಶ್ ಸಂಭಾಷಣೆ ಬರೆದಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳು ಇಲ್ಲಿ ಕೆಲಸ ಮಾಡುತ್ತಿವೆ ಎಂಬುದು ರಾಮ್ ಪ್ರಿಯಾ ಅವರ ಮಾತು. ಈಗಾಗಲೇ ಹಾಡುಗಳ ಧ್ವನಿಮುದ್ರಣ ಕಾರ್ಯ ಮುಗಿದಿದ್ದು, ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಮುಂದಿನ ಗುರುವಾರದಿಂದ ಚಿತ್ರಕ್ಕೆ ಚಾಲನೆ ಸಿಗಲಿದೆ.