ಹೊಸದಿಲ್ಲಿ: ದೇಶಾದ್ಯಂತ ರೈಲ್ವೇ ಮಾರ್ಗಗಳ ಆಧುನೀಕರಣಕ್ಕೆ ಮುಂದಾಗಿರುವ ಭಾರತೀಯ ರೈಲ್ವೇ ಇದೀಗ ತನಗೆ ಬೇಕಾಗಿರುವ ಉಕ್ಕಿಗಾಗಿ ಖಾಸಗಿ ಕಂಪನಿಗಳ ಮೊರೆ ಹೋಗಲು ನಿರ್ಧರಿಸಿದೆ. ಪರಿಣಾಮ ಸರ್ಕಾರಿ ಸ್ವಾಮ್ಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾಕ್ಕೆ ಆದಾಯ ಖೋತಾ ಆಗುವ ಭೀತಿ ಎದುರಾಗಿದೆ. ಇದಕ್ಕೆ ಕಾರಣ ರೈಲ್ವೇಗೆ ಬೇಕಾದಷ್ಟು ಉಕ್ಕು ಪೂರೈಕೆ ಎಸ್‌ಎಐಎಲ್‌ಗೆ ಸಾಧ್ಯವಾಗುತ್ತಿಲ್ಲ ಎನ್ನುವುದು. ಈ ವರ್ಷದಲ್ಲಿ ರೈಲ್ವೇ ಇಲಾಖೆ ಎಸ್‌ಎಐಎಲ್‌ಗೆ 8,50,000 ಟನ್ ಉಕ್ಕು ಪೂರೈಕೆ ಗುರಿ ನೀಡಿದೆ. ಆದರೆ ಅದು 2,50,000 ಟನ್ ಮಾತ್ರ ಒದಗಿಸಲು ಶಕ್ತವಾಗಬಹುದು ಎನ್ನಲಾಗಿದೆ. ಇದರಿಂದಾಗಿ ರೈಲ್ವೇ ಇಲಾಖೆ ಖಾಸಗಿಯತ್ತ ಮುಖ ಮಾಡಿದ್ದು 4690 ಕೋಟಿ ರೂ ಮೌಲ್ಯದ ಉಕ್ಕನ್ನು ಖರೀದಿಸಲು ಮುಂದಾಗಿದೆ. 5 ವರ್ಷದಲ್ಲಿ ಇಲಾಖೆ ಆಧುನೀಕರಣ, ಮಾರ್ಗ ವಿಸ್ತರಣೆ ಇತ್ಯಾದಿಗಳಿಗೆ 8.71 ಲಕ್ಷ ಕೋಟಿ ರೂ. ವಿನಿಯೋಗಕ್ಕೆ ಮುಂದಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಉಕ್ಕು ಕಂಪನಿಗೆ ಹೊರತಾಗಿ ಖಾಸಗಿಯವ ರಿಂದಲೇ ರೈಲ್ವೇ ಉಕ್ಕನ್ನು ಹೆಚ್ಚು ಪಡೆಯಲಿದೆ ಎನ್ನಲಾಗಿದೆ.