ಹೊಸದಿಲ್ಲಿ: ಬಾಹ್ಯಾಕಾಶ ವಲಯವನ್ನು ಖಾಸಗಿ ಸಂಸ್ಥೆಗಳ ಪ್ರವೇಶಕ್ಕೆ ಮುಕ್ತಗೊಳಿಸುವುದರಿಂದ ಭಾರತಕ್ಕೆ ಹಲವು ಅನುಕೂಲಗಳಿದ್ದು, ಜಾಗತಿಕ ಬಾಹ್ಯಾಕಾಶ ಆರ್ಥಿಕ ವ್ಯವಸ್ಥೆಯಲ್ಲಿ ದೇಶ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೊ) ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ಮುಕ್ತವಾಗಿಸುವುದರಿಂದ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯ ವೃದ್ಧಿಸಲಿದ್ದು, ಹೊಸ ತಂತ್ರಜ್ಞಾನಗಳ ಪ್ರಯೋಜನ ಪಡೆಯಬಹುದಾಗಿದೆ.
ಇದು ಕ್ಷೇತ್ರದ ಬೆಳವಣಿಗೆಗೆ ನೆರವಾಗುವುದಷ್ಟೇ ಅಲ್ಲದೆ, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲು ಸಹಕಾರಿಯಾಗಲಿದೆ ಎಂದರು.
ಬಾಹ್ಯಾಕಾಶ ಆಧಾರಿತ ಸೇವೆಗಳು ಭಾರತದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ಅಭಿಪ್ರಾಯಪಟ್ಟ ಶಿವನ್, ಸುಧಾರಿತ ಬಾಹ್ಯಾಕಾಶ ತಂತ್ರಜ್ಞಾನಗಳು ಭಾರತದ ಔದ್ಯಮಿಕ ಪ್ರಗತಿಗೆ ಅವಕಾಶ ಮಾಡಿಕೊಡಲಿವೆ ಎಂದರು.
ಸಾಫ್ಟ್ ಲ್ಯಾಂಡಿಂಗ್: ಈ ನಡುವೆ ಇಸ್ರೋದ ಚಂದ್ರಯಾನ 3ರ ಲ್ಯಾಂಡಿಂಗ್ ಯೋಜನೆಯ ಭಾಗವಾಗಿ ಲ್ಯಾಂಡರ್ ಅನ್ನು ಅತ್ಯಂತ ನಯವಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಸುವ ಕುರಿತಂತೆ ಜೈಪುರ ವಿಶ್ವವಿದ್ಯಾಲಯದ ಇಬ್ಬರು ಸಂಶೋಧಕರು ಅಧ್ಯಯನದಲ್ಲಿ ತೊಡಗಿದ್ದಾರೆ.
ಚಂದ್ರಯಾನ-3, ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, ಸಯಾನ್ ಚಟರ್ಜಿ ಮತ್ತು ಡಾ| ಅಮಿತವ್ ಗುಪ್ತಾ ಎಂಬವರು ಲ್ಯಾಂಡಿಂಗ್‌ಗೆ ಸಂಬಂಧಿಸಿದ ಅಧ್ಯಯನದಲ್ಲಿ ನಿರತರಾಗಿರುವುದಾಗಿ ಮೂಲಗಳು ತಿಳಿಸಿವೆ.