ಹುಬ್ಬಳ್ಳಿ: ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿ ಪ್ರಮುಖ ಆರು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಜು.6ರಿಂದ ರಾಜ್ಯದಲ್ಲಿನ ಎಲ್ಲಾ ಅನುದಾನ ರಹಿತ, ಅನುದಾನಿತ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.
ವಿವಿಧ ಮಠಾಧೀಶರ ಸಾನ್ನಿಧ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಇಲ್ಲಿನ ಲ್ಯಾಮಿಂಗ್ಟನ್ ಶಾಲೆಯಲ್ಲಿ ಭಾನುವಾರ ನಡೆದ ರಾಜ್ಯ ಖಾಸಗಿ ಆಡಳಿತ ಮಂಡಳಿ ಮತ್ತು ನೌಕರರ ಸಮನ್ವಯ ರಾಜ್ಯ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಮಾ.16-24ರವರೆಗೆ ಧಾರವಾಡದ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ ಎದುರು ವಿವಿಧ ಜಿಲ್ಲೆಗಳ ಶಿಕ್ಷಕರು ಸರದಿ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಬೇಡಿಕೆಗಳು: 1995ರ ನಂತರದಲ್ಲಿ ಆರಂಭವಾದ ಕನ್ನಡ ಶಾಲಾ- ಕಾಲೇಜುಗಳನ್ನು ಅನುದಾನಕ್ಕೊಳಪಡಿಸಬೇಕು. ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಬೇಕು. ಕಾಲ್ಪನಿಕ ವೇತನ ಬಡ್ತಿಗಾಗಿ ಬಸವರಾಜ ಹೊರಟ್ಟಿ ವರದಿ ಜಾರಿಗೊಳಿಸಬೇಕು. ಶಿಕ್ಷಕ ಮತ್ತು ಮಕ್ಕಳ ಅನುಪಾತ 1:50 ಎಂಬ ನಿಯಮ ಜಾರಿ. ಜ್ಯೋತಿ ಸಂಜೀವಿನಿಯನ್ನು ಅನುದಾನಿತ ಶಾಲಾ ಸಿಬ್ಬಂದಿಗೂ ವಿಸ್ತರಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
ಅನುದಾನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟಕ್ಕೆ ಮುಂದಾಗಿದ್ದಾಗ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು, ಹೋರಾಟ ಬೇಡ. ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅಧಿವೇಶನ ವೇಳೆ ನೀಡಿದ ಭರವಸೆ ಬಗ್ಗೆ ಕೇಳಿದಾಗ, ಮೇ ಒಳಗೆ ಸಮಸ್ಯೆ ಇತ್ಯರ್ಥ ಪಡಿ ಸುವ ಭರವಸೆ ನೀಡಿದ್ದಾರೆ. ಶಿಕ್ಷಕರ-ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಶಾಲಾ-ಕಾಲೇಜು ಬಂದ್ ಮಾಡಿ ಹೋರಾಟ ಮಾಡೋಣ. ಅದಕ್ಕೆ ನಾನೇ ನೇತೃತ್ವ ವಹಿಸುವೆ.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ
ಶಿಕ್ಷಕರ ಸಮಸ್ಯೆ, ಅನುದಾನಿತ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಚಿವರಾಗಿ ಏನೂ ಮಾಡಲಿಲ್ಲ. ಬದಲಾಗಿ ಇನ್ನಷ್ಟು ತೊಂದರೆ ಸೃಷ್ಟಿಸಿದರು. ತನ್ವೀರ್ ಸೇಠ್ ಅವರು ಇಲಾಖೆಯಲ್ಲಿ ಅವಾಂತರ ಸೃಷ್ಟಿಸಿದರು. ಶಿಕ್ಷಣ ಸಚಿವ ಸುರೇಶ ಕುಮಾರ್ ಸೂಕ್ಷ್ಮವ್ಯಕ್ತಿತ್ವದವರು. ಮೇ ವೇಳೆಗೆ ಸಮಸ್ಯೆ ಇತ್ಯರ್ಥ ಭರವಸೆ ನೀಡಿದ್ದು, ಈಡೇರಿಕೆ ವಿಶ್ವಾಸವಿದೆ. ಸರ್ಕಾರ ಸ್ಪಂದಿಸದಿದ್ದರೆ ನಿಮ್ಮ ಹೋರಾಟದಲ್ಲಿ ನಾನೂ ಪಾಲ್ಗೊಳ್ಳುವೆ.
-ವೈ.ಎಸ್.ವಿ.ದತ್ತ, ಮಾಜಿ ಶಾಸಕ