Advertisement

ಖಾಸಗಿ ಐಟಿಐಗಳಿಗೆ ಅನುದಾನ ಸ್ಥಗಿತ ಭಾಗ್ಯ

10:33 AM Nov 01, 2018 | |

ಕುಂದಾಪುರ: ನಮ್ಮ ಸಂಸ್ಥೆಯಿಂದ ಈ ವರ್ಷ 74 ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೋದರು. ಈ ಪೈಕಿ 68 ಜನಕ್ಕೆ ಕೆಲಸ ದೊರೆತಿದೆ. ಎಲ್ಲರೂ ಸರಿಸುಮಾರು 12 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ನನಗೋ 10 ಸಾವಿರ  ರೂ. ಸಂಬಳ. ಈ ವರ್ಷ ಸೇರಿದ ವಿದ್ಯಾರ್ಥಿಗೆ ಮುಂದಿನ ವರ್ಷ 14 ಸಾವಿರ ವೇತನವಾದರೆ ನನಗೆ 10,500 ರೂ.! ಆಗುತ್ತದೆ. ಇದು ನಮ್ಮ ಹಣೆ ಬರಹ ಎಂದು ಹಣೆಯ ಬೆವರುಜ್ಜಿ ಕೊಂಡರು ಕಳೆದ ಎಂಟು ವರ್ಷಗಳಿಂದ ಖಾಸಗಿ 
ಅನುದಾನ ರಹಿತ ಐಟಿಐಯಲ್ಲಿರುವ ಕಿರಿಯ ತರಬೇತಿ ಅಧಿಕಾರಿ(ಜೆಟಿಒ)ಯೊಬ್ಬರು.

Advertisement

ಐಟಿಐಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ, ಆರ್ಥಿಕವಾಗಿ ಸ್ಥಿತಿವಂತರಲ್ಲದ, ಬೇಗನೇ ಉದ್ಯೋಗಕ್ಕೆ ಸೇರಬೇಕೆಂಬ ಒತ್ತಡ ಇರುವವರು ಸೇರುವುದು.1 ಕೋರ್ಸಿಗೆ 16ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸರಕಾರಿ ಕೋಟಾದಲ್ಲಿ ತೆಗೆದುಕೊಳ್ಳುವಂತಿಲ್ಲ. ವಿದ್ಯಾರ್ಥಿಗೆ ತಲಾ 10 ಸಾವಿರ ರೂ.ಗಿಂತ ಹೆಚ್ಚು ಡೊನೇಶನ್‌ ಪಡೆಯುವಂತಿಲ್ಲ. 64 ವಿದ್ಯಾರ್ಥಿಗಳಿದ್ದರೆ 6.4 ಲಕ್ಷ ರೂ. ಸಂಸ್ಥೆಗೆ ದೊರೆತರೆ ಖರ್ಚು 25 ಲಕ್ಷ ರೂ. ಬರುತ್ತದೆ. ಇದರಿಂದಾಗಿ ರಾಜ್ಯಾದ್ಯಂತ ಐಟಿಐಗಳು ಮುಚ್ಚುತ್ತಿವೆ. ಇಷ್ಟಕ್ಕೂ ಹೀಗಾಗಲು ಕಾರಣ 2000ನೆ ಇಸವಿ ನಂತರ ಆರಂಭವಾದ ಐಟಿಐಗಳಿಗೆ ರಾಜ್ಯ ಸರಕಾರ ಅನುದಾನ ನೀಡದಿರುವುದು. 

ಥಾಮಸ್‌ ವರದಿ
ಪದವಿ ಕಾಲೇಜುಗಳಿಗೆ ವಿವಿ ಧನಸಹಾಯ ಆಯೋಗ ಇದ್ದಂತೆ ಐಟಿಐಗಳಿಗೂ ಸಿಬಂದಿ ವೇತನಕ್ಕೆ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿ ಅನುದಾನವಿದೆ. ಐಟಿಐ ಅನುದಾನಕ್ಕೆ ಸಂಬಂಧಿಸಿ 2003ರಲ್ಲಿ ಥಾಮಸ್‌ ವರದಿಯೊಂದನ್ನು ರೂಪಿಸಲಾಗಿದ್ದು 3 ವರ್ಷ ಪೂರೈಸಲ್ಪಟ್ಟ ಅಲ್ಪಸಂಖ್ಯಾಕ ಐಟಿಐ, 5 ವರ್ಷ ಪೂರೈಸಿದ ಗ್ರಾಮೀಣ ಐಟಿಐಗಳಿಗೆ ಅನುದಾನ ಕೊಡಬಹುದು ಎಂದಿದ್ದು ಈ ಅನುದಾನ ನೀತಿಸಂಹಿತೆ 2016ರಿಂದ ಜಾರಿಯಲ್ಲಿದೆ.  

ರಾಜ್ಯದಲ್ಲಿ 200 ಸರಕಾರಿ, 196 ಖಾಸಗಿ, 1,300 ಅನುದಾನ ರಹಿತ ಐಟಿಐಗಳಿವೆ. ಈ ಪೈಕಿ 800ರಷ್ಟು ಐಟಿಐಗಳು ಅನುದಾನಕ್ಕೆ ಅರ್ಹತೆ ಪಡೆದಿವೆ. 2014ರಲ್ಲಿ ಪರಿವೀಕ್ಷಣೆ ನಡೆದಾಗ 436 ಅರ್ಹತೆ ಪಡೆದು 361 ಐಟಿಐಗಳಿಗೆ ಅನುದಾನ ಕೊಡಲು ಶಿಫಾರಸ್ಸಾಗಿತ್ತು. ದ.ಕ.ದಲ್ಲಿ 5, ಉಡುಪಿ 3, ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಸನದಲ್ಲಿ 68 ಅನುದಾನರಹಿತ ಐಟಿಐಗಳಿವೆ.

ಸ್ಥಗಿತ
1986ರಿಂದ ಹೋರಾಟ ನಡೆದು 1997ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ ಸರಕಾರದಿಂದ ಅನುದಾನ ಸಂಹಿತೆ ತರಿಸಿ ಸಂಯೋಜನೆಗೊಳಪಟ್ಟು 7 ವರ್ಷ ಪೂರೈಸಿದ ಐಟಿಐಗಳಿಗೆ ಅನುದಾನ ಆರಂಭಿಸಿದರು. 2000ನೇ ಇಸವಿ ನಂತರದ ಈಗ 17 ವರ್ಷ ಪೂರೈಸಿದರೂ ಯಾವುದೇ ಐಟಿಐಗೂ ಪೂರ್ವಸೂಚನೆ ಇಲ್ಲದೇ ಅನುದಾನ ಸ್ಥಗಿತವಾಗಿದೆ. 

Advertisement

ಮಾಳಿಗೆ ಕೋರ್ಸು
ಸರಕಾರಿ ನಿಯಮದಂತೆ ಒಂದಷ್ಟು ಕಂಪ್ಯೂಟರ್‌, ತರಬೇತಿದಾರರು ಇದ್ದರೆ ಕಂಪ್ಯೂಟರ್‌ ಕೋರ್ಸಿನ ತರಬೇತಿ ನೀಡುವ “ಮಾಳಿಗೆ ತರಬೇತಿ’ಗೆ ಸರಕಾರ ಕೌಶಲಾಭಿವೃದ್ಧಿಗಾಗಿ ಕೌಶಲ ಕರ್ನಾಟಕ ಹೆಸರಿನಲ್ಲಿ ವಿದ್ಯಾರ್ಥಿ ಕೇಂದ್ರಿತ ಅನುದಾನ ಎಂದು ತಲಾ ವಿದ್ಯಾರ್ಥಿಗೆ 8 ಸಾವಿರ ರೂ., ಸಂಸ್ಥೆಗೆ 4 ಸಾವಿರ ರೂ. ಅನುದಾನ ನೀಡುತ್ತದೆ.
ಇದೇ ಅನುದಾನ ಖಾಸಗಿ ಐಟಿಐಗಳಿಗೂ ನೀಡುವ ಭರವಸೆಯಿದೆ. ಆದರೆ ಐಟಿಐಗಳು ನಿರಾಕರಿಸಿವೆ. ಏಕೆಂದರೆ ತೇರ್ಗಡೆಯಾದ  ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ವಾದರೆ ಪ್ರವೇಶ/ತೇರ್ಗಡೆ ಕಡಿಮೆಯಾದರೆ ಸಿಬಂದಿ ವೇತನಕ್ಕೂ ಕಲ್ಲು.

ಇನ್ನೂ ಆಗಿಲ್ಲ
ಥಾಮಸ್‌ ವರದಿ ಪ್ರಕಾರ ವಿದ್ಯಾರ್ಥಿ ಕೇಂದ್ರಿತ ಅನುದಾನ ನೀಡಲು ಸಂಪುಟ ನಿರ್ಧರಿಸಿದೆ. ಆದರೆ ಅದನ್ನು ಮರುಪರಿಶೀಲಿಸಲು ಖಾಸಗಿ ಐಟಿಐಗಳಿಂದ ಮನವಿಗಳು ಬಂದಿದ್ದು ಇನ್ನೂ ಪ್ರತ್ಯೇಕ ನಿರ್ಣಯ ಕೈಗೊಂಡಿಲ್ಲ. 
 ಆರ್‌. ವಿ. ದೇಶಪಾಂಡೆ, ಕೌಶಲಾಭಿವೃದ್ಧಿ ಇಲಾಖೆ ಸಚಿವರು

ಅನುದಾನ ಇಲ್ಲ
ಐಟಿಐ ಕಲಿತ ಶೇ. 95 ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುತ್ತಿದೆ. ಎಂಜಿನಿ ಯರಿಂಗ್‌ ಕಾಲೇಜು ಮಾಡುವಷ್ಟು ಸರಕಾರಿ ನಿಯಮದಂತೆ ಐಟಿಐ ಪ್ರಾರಂಭಿಸಿದರೂ 7 ವರ್ಷ ಪೂರೈಸಿದ್ದಕ್ಕೆ ಅನುದಾನ ಕೊಡಬೇಕೆಂಬ ನಿಯಮ ಇದ್ದರೂ ಕಳೆದ 17 ವರ್ಷಗಳಿಂದ ಅನುದಾನ ಮಾತ್ರ ಲಭ್ಯವಾಗುತ್ತಿಲ್ಲ.  
ಕೆ.ಎಸ್‌. ನವೀನ್‌ ಕುಮಾರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅನುದಾನ ರಹಿತ ಐಟಿಐಗಳ ಸಂಘಟನೆ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next