Advertisement

ಖಾಸಗಿ ಸಿಟಿ ಬಸ್‌ ನಿಲ್ದಾಣದಲ್ಲಿ ನಿರ್ವಹಣೆ ಕೊರತೆ

01:22 AM Feb 29, 2020 | Sriram |

ಉಡುಪಿ: ನಗರದ ವಿವಿಧ ಭಾಗಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಖಾಸಗಿ ಬಸ್‌ಗಳ ನಿಲ್ದಾಣದಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ.

Advertisement

ನಗರ ಖಾಸಗಿ ಬಸ್‌ ನಿಲ್ದಾಣದಿಂದ ನಿತ್ಯ ಮಲ್ಪೆ, ಅಲೆವೂರು, ಮಂಚಿ, ಸಂತೆಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಿಗೆ 80 ಬಸ್‌ಗಳು ಸಂಚರಿಸುತ್ತಿವೆ. ಈ ಎಲ್ಲ ಬಸ್‌ಗಳು ಖಾಸಗಿ ಸಿಟಿ ಬಸ್‌ ನಿಲ್ದಾಣ ಮೂಲಕ ಇತರೆ ಸ್ಥಳವನ್ನು ಸಂಪರ್ಕಿಸುತ್ತವೆೆ. ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ನಿಲ್ದಾಣದಲ್ಲಿ ನಿರ್ವಹಣೆ ಕೊರತೆಯಿಂದ ಪ್ರಯಾಣಿಕರು ಸಮಸ್ಯೆ ಪಡುವಂತಾಗಿದೆ.

ತುಂಡಾದ ಬೆಂಚ್‌ಗಳು!
ಸಿಟಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಕಟ್ಟೆಯ ಇಂಟರ್‌ಲಾಕ್‌ ಬೆಂಚ್‌ಗಳು ತುಂಡಾಗಿ ಬಿದ್ದಿದ್ದು, ಹಲವು ತಿಂಗಳುಗಳೇ ಕಳೆದಿವೆ. ಇತರೆ ಬೆಂಚ್‌ಗಳ ತಳದಲ್ಲಿ ತುಕ್ಕು ಹಿಡಿದು ತುಂಡಾಗುವ ಹಂತದಲ್ಲಿವೆ. ಪ್ರಯಾಣಿಕರಿಗೆ ಕೂರಲೂ ಜಾಗವಿಲ್ಲ. ಇದರಲ್ಲೇನಾದರೂ ಕೂತರೆ ಮೂಳೆ ಮುರಿದುಕೊಳ್ಳುವುದು ಖಚಿತ ಎಂಬಂತಿದೆ.

ಇಂಟರ್‌ಲಾಕ್‌ಗೆ ಹಾನಿ
ಬಸ್‌ ನಿಲ್ದಾಣದಲ್ಲಿ 5 ಶೆಲ್ಟರ್‌ಗಳಿವೆ. ಕೆಲ ಶೆಲ್ಟರ್‌ ಕಟ್ಟೆಯ ಇಂಟರ್‌ಲಾಕ್‌ಗಳು ಕಿತ್ತು ಹೋಗಿವೆೆ. ಇನ್ನೂ ನಗರ ವ್ಯಾಪ್ತಿಯ ಬಸ್‌ ನಿಲ್ದಾಣಗಳ ಕೆಲ ಆಸನಗಳು ಸಂಪೂರ್ಣವಾಗಿ ಹಾಳಾಗಿವೆ.

ಮತ್ತಷ್ಟು ಆಸನಕ್ಕೆ ಬೇಡಿಕೆ
ಬಸ್‌ ನಿಲ್ದಾಣದಲ್ಲಿ ಬೆಂಚ್‌ ಮುರಿದು ಬಿದ್ದು ಹಲವು ತಿಂಗಳಾಗಿವೆ. ಸಂಬಂಧಪಟ್ಟವರು ಕೂಡಲೇ ದುರಸ್ತಿಗೊಳಿಸಬೇಕು. ನಿತ್ಯ ಸಾವಿರಾರು ಜನರು ಪ್ರಯಾಣಿಸುವ ಈ ಬಸ್‌ ನಿಲ್ದಾಣದಲ್ಲಿ ಕೇವಲ ಒಂದು ಬಾರಿಗೆ 5 ಶೆಲ್ಟರ್‌ನಲ್ಲಿ ಗರಿಷ್ಠ 30 ಮಂದಿ ಕುಳಿತುಕೊಳ್ಳಬಹದು. ಇದರಿಂದಾಗಿ ಪ್ರಯಾಣಿಕರು ನಿಂತುಕೊಂಡು ಬಸ್‌ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸ್ವತ್ಛತೆಗೆ -ಗಾರ್ಡ್‌ ನೇಮಕ!
ನಿಲ್ದಾಣದಲ್ಲಿ ಎಂಜಲು, ಗುಟ್ಕ, ಬೀಡಿ ತಿಂದು ಉಗುಳುವವರನ್ನು, ಕಸ ಎಸೆಯುವವರನ್ನು ನಿಯಂತ್ರಿ ಸುವ ನಿಟ್ಟಿನಲ್ಲಿ ನಿಲ್ದಾಣ ಸ್ವತ್ಛತೆಗೆ ಸಿಟಿ ಬಸ್‌ ಮಾಲೀಕರು ಮತ್ತು ಚಾಲಕರು, ನಿರ್ವಾಹಕರು ನೌಕರರ ಸಂಘದವರು ಹಾಗೂ ದಾನಿಗಳ ನೆರವು ಪಡೆದು ಸೆಕ್ಯೂರಿಟಿಗಾರ್ಡ್‌ ಒಬ್ಬರನ್ನು ನೇಮಕ ಮಾಡಿದ್ದಾರೆ. ಈ ಸೆಕ್ಯೂರಿಟಿ ಗಾರ್ಡ್‌ ಬಸ್‌ ನಿಲ್ದಾಣ ಸುತ್ತಾಡುತ್ತ ಸೂಚನೆ ಕೊಡುತ್ತ ಇರುತ್ತಾರೆ. ಕಸ ಎಸೆಯಲು ಅಲ್ಲಲ್ಲಿ ಕಸದ ಡಬ್ಬಿ (ಒಣ ಕಸ-ಹಸಿ ಕಸ ಪ್ರತ್ಯೇಕ), ಉಗುಳಲು ಸಿಮೆಂಟ್‌ ಚಟ್ಟಿಯನ್ನು ಇರಿಸಲಾಗಿದೆ.

ಗಮನಕ್ಕೆ ತರಲಾಗಿದೆ
ಸಿಟಿ ಬಸ್‌ ನಿಲ್ದಾಣದ ನಿರ್ವಹಣಾ ಜವಾ ಬ್ದಾರಿಯ ನಗರಸಭೆಯದ್ದು, ಒಂದು ಬಸ್‌ಗೆ 150ರೂ ನಂತೆ 80 ಬಸ್‌ಗಳ ಮಾಸಿಕ 12,000 ರೂ. ನಗರಸಭೆಗೆ ಪಾವತಿಯಾಗುತ್ತಿದೆ. ಆಸನಗಳು ಹಾಳಾಗಿರುವ ಕುರಿತು ನಗರಸಭೆ ಗಮನಕ್ಕೆ ತರಲಾಗಿದೆ.
-ಸುರೇಶ್‌ ನಾಯಕ್‌, ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ.

ವ್ಯಾಪ್ತಿಗೆ ಬರುವುದಿಲ್ಲ
ಖಾಸಗಿ ಸಿಟಿ ಬಸ್‌ ನಿಲ್ದಾಣದ ನಿರ್ವಹಣೆಯ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ.
-ಮೋಹನ್‌ ರಾಜ್‌, ಎಇಇ ನಗರಸಭೆ. ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next