Advertisement

ದಸರಾಗೆ ಖಾಸಗಿ ಬಸ್‌ ದರದ ಬರ

11:56 AM Oct 12, 2018 | |

ಬೆಂಗಳೂರು: ನಾಡಹಬ್ಬ ದಸರಾಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಖಾಸಗಿ ಬಸ್‌ಗಳ ಪ್ರಯಾಣ ದರ ಗಗನಕ್ಕೇರಿದ್ದು, ಅಕ್ಷರಶಃ ಸುಲಿಗೆಗೆ ನಿಂತಿವೆ. ಹಬ್ಬದ ಅಂಗವಾಗಿ ಈಗಾಗಲೇ ಬೆಂಗಳೂರಿನಿಂದ ವಿವಿಧ
ಊರುಗಳಿಗೆ ತೆರಳುವ ಬಸ್‌, ರೈಲುಗಳು ಭರ್ತಿಯಾಗಿದ್ದು, ಪರಿಸ್ಥಿತಿ ಲಾಭ ಪಡೆಯಲು ಖಾಸಗಿ ಬಸ್‌ಗಳು ಬೇಕಾಬಿಟ್ಟಿ ದರ ನಿಗದಿಪಡಿಸಿವೆ. ಇದರಿಂದ ಹಬ್ಬದ ಆಚರಣೆಗಾಗಿ ತೆರಳುವ ಜನ, ಬಸ್‌ ಪ್ರಯಾಣಕ್ಕಾಗಿಯೇ ಸಾವಿರಗಟ್ಟಲೆ ಹಣ ಸುರಿಯಬೇಕಾಗಿದೆ. ಇದು ಸಾಮಾನ್ಯ ದಿನಗಳಿಗಿಂತ ಹೆಚ್ಚು-ಕಡಿಮೆ ದುಪ್ಪಟ್ಟು ಆಗಿದೆ.

Advertisement

ಗುರುವಾರ ಮತ್ತು ಶುಕ್ರವಾರ ಹಬ್ಬದ ರಜೆ ಹಾಗೂ ಶನಿವಾರ-ಭಾನುವಾರ ವಾರಾಂತ್ಯ ದಿನಗಳು ಸೇರಿದಂತೆ ಸತತ ನಾಲ್ಕು ದಿನಗಳು ರಜೆ ಆಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳೆಲ್ಲರೂ ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ರೈಲುಗಳಂತೂ ತಿಂಗಳ ಹಿಂದೆಯೇ ಭರ್ತಿಯಾಗಿವೆ. ಸರ್ಕಾರಿ ಬಸ್‌ಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜನ ಹೆಚ್ಚುವರಿ ಬಸ್‌ಗಳ ಎದುರುನೋಡುತ್ತಿದ್ದಾರೆ.

ಪ್ರತಿ ಹಬ್ಬದ ಸೀಜನ್‌ಗಳಲ್ಲಿ ಹೀಗೆ ಖಾಸಗಿ ಬಸ್‌ಗಳಿಂದ ಸುಲಿಗೆ ಮಾಡಲಾಗುತ್ತದೆ. ಇದರ ವಿರುದ್ಧ ಇದುವರೆಗೆ ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣ ದರವು ಹಬ್ಬದ ಸೀಜನ್‌ನಲ್ಲಿ ಸಾಮಾನ್ಯ ಶೇ. 20ರಷ್ಟು ಪ್ರಯಾಣ ದರ ಹೆಚ್ಚಿರುತ್ತದೆ. ವಿವಿಧ ಕಡೆಗಳಿಂದ ಈ ಬಸ್‌ಗಳು ಬೆಂಗಳೂರಿಗೆ ಹೆಚ್ಚು-ಕಡಿಮೆ ಖಾಲಿ ಬಂದಿರುತ್ತವೆ. ಆ ಹೊರೆಯನ್ನು ಸರಿದೂಗಿಸಲು ಈ ದರ ವಿಧಿಸಲಾಗಿರುತ್ತದೆ.

ಈ ಬಾರಿ ಹಬ್ಬದ ಹಿನ್ನೆಲೆಯಲ್ಲಿ ಸುಮಾರು ಸಾವಿರ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಖಾಸಗಿ ಬಸ್‌ಗಳ ಪ್ರಯಾಣ ದರ ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ವಿಜಯಪುರ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ತೆರಳುವ ಬಸ್‌ ಗಳ ಪ್ರಯಾಣ ದರ ಸರಾಸರಿ 1,300ರಿಂದ 1,500 ರೂ. ಇದೆ. ಹಬ್ಬಕ್ಕೆ ಇನ್ನು ಎರಡು ದಿನಗಳು ಬಾಕಿ ಇರುವಾಗ, ಈ ದರ ಮತ್ತಷ್ಟು ಏರಿಕೆ ಆಗಲಿದೆ!

ಹೆಚ್ಚುವರಿ ರೈಲು ಬೋಗಿಗಳು, ಬಸ್‌ಗಳೂ ಈಗಾಗಲೇ ಭರ್ತಿಯಾಗಿವೆ. ಸಾಲು ರಜೆ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದೆ.
ಅದರಲ್ಲೂ ಉತ್ತರ ಕರ್ನಾಟಕಕ್ಕೆ ಹೋಗುವವರ ಸಂಖ್ಯೆ ಹೆಚ್ಚಿದೆ. ಆದರೆ, ಆ ಭಾಗದ ಎಲ್ಲ ಊರುಗಳಿಗೆ ತೆರಳುವ ಬಹುತೇಕ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರ ಸಾವಿರ ರೂ.ಗಿಂತ ಹೆಚ್ಚಿದೆ. ಪ್ರತಿ ಸಲ ಈ ಸಮಸ್ಯೆ ಇರುತ್ತದೆ. ಸರ್ಕಾರ ಮಧ್ಯಪ್ರವೇಶಿಸಿ, ಇದಕ್ಕೆ ಕಡಿವಾಣ ಹಾಕಬೇಕು ಎಂದು ಹುಬ್ಬಳ್ಳಿಯ ಸುನೀಲ್‌ ಆಗ್ರಹಿಸುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next