ಕುಂದಾಪುರ: ಮುಂದಿನ ವರ್ಷ ನಡೆಯಲಿರುವ ಐಸಿಸಿ ಕಿವುಡರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ಆರಿಸಲಾದ ಭಾರತದ ಸಂಭಾವ್ಯ ತಂಡದಲ್ಲಿ ಕೊಲ್ಲೂರು ಸಮೀಪದ ಗೋಳಿಹೊಳೆಯ ಪೃಥ್ವಿರಾಜ್ ಶೆಟ್ಟಿ ಹುಂಚನಿ ಸ್ಥಾನ ಪಡೆದಿದ್ದಾರೆ.
ತಂಡದ ಅಂತಿಮ 16 ಮಂದಿಯ ಆಯ್ಕೆ ಪ್ರಕ್ರಿಯೆ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ಇದಕ್ಕೂ ಮೊದಲು ಅಂತಿಮ 41 ಮಂದಿಯ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ 30 ವರ್ಷದ ಪೃಥ್ವಿರಾಜ್ ಶೆಟ್ಟಿ ಕಾಣಿಸಿಕೊಂಡಿದ್ದು, ಭಾರತ ತಂಡ ದಲ್ಲಿ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರೊಂದಿಗೆ ರಾಜ್ಯದ ಅನ್ಸಿಲ್ ಪಿಂಟೋ ಮತ್ತು ಶೋಯಿಬ್ ಮಹಮ್ಮದ್ ಕೂಡ ಆಯ್ಕೆಯಾಗಿದ್ದಾರೆ.
ಪ್ರತಿಭಾವಂತ ಆಟಗಾರ :
ಗೋಳಿಹೊಳೆ ಗ್ರಾಮದ ಹುಂಚನಿಯ ಸುಭಾಶ್ಚಂದ್ರ ಶೆಟ್ಟಿ- ಶೀಲಾವತಿ ದಂಪತಿಯ ಮೂವರು ಮಕ್ಕಳಲ್ಲಿ ಎರಡನೆಯವರಾದ ಪೃಥ್ವಿ ರಾಜ್ ಹುಟ್ಟು ಕಿವುಡರಾದರೂ ಕ್ರಿಕೆಟ್ ಸಾಧನೆಗೆ ಅಡ್ಡಿಯಾಗಲಿಲ್ಲ. ಅಂಪಾರು ಮೂಡುಬಗೆಯ “ವಾಗ್ಜೋತಿ ವಿಶೇಷ ಮಕ್ಕಳ ಶಾಲೆ’ಯ ಹಳೆ ವಿದ್ಯಾರ್ಥಿಯಾದ ಇವರು, ವೇಗದ ಬೌಲಿಂಗ್ ಜತೆಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿಯೂ ಮಿಂಚುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ಮೂಗರ ಕ್ರಿಕೆಟ್ ತಂಡದ ಆಟಗಾರನಾಗಿದ್ದಾರೆ. ಕರ್ನಾಟಕ ತಂಡದ ನಾಯಕನಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಪೃಥ್ವಿರಾಜ್ ಕ್ರಿಕೆಟಿಗಾಗಿ ಈ ವೃತ್ತಿಯನ್ನು ತ್ಯಜಿಸಿದ್ದಾರೆ. ವಿಶೇಷ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರವಲ್ಲದೆ ಎಲ್ಲರಂತೆ ಎಂಪಿಲ್‌ನಲ್ಲಿ ಐಕಾನ್ ಆಟಗಾರನಾಗಿ, ಕುಂದಾಪುರದ ಟಾರ್ಪಡೋಸ್ ತಂಡದ ಆಟಗಾರ ನಾಗಿಯೂ ಮಿಂಚಿದ್ದಾರೆ.
ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪೃಥ್ವಿರಾಜ್ ಭಾರತೀಯ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ನನಗೆ ಬೆಂಬಲವಿತ್ತ ಎಲ್ಲರಿಗೂ ಧನ್ಯವಾದಗಳು. ಭಾರತ ತಂಡಕ್ಕೆ ಆಯ್ಕೆಯಾಗುವ ನನ್ನ ಬಹು ದಿನಗಳ ಕನಸು ಈಡೇರುವ ಹಂತದಲ್ಲಿದೆ. ನಿಮ್ಮ ಶುಭ ಹಾರೈಕೆಗಳಿರಲಿ.
-ಪೃಥ್ವಿರಾಜ್ ಶೆಟ್ಟಿ