Advertisement

ಸೆನ್ಸೇಶನ್‌ “ಪೃಥ್ವಿ’ಗೆ ಬಾಗಿದ ಕ್ರಿಕೆಟ್‌ ಜಗತ್ತು

02:10 PM Oct 20, 2018 | Team Udayavani |

ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ ದೇಶದ ಪ್ರಥಮದರ್ಜೆ ಕ್ರಿಕೆಟ್‌ ವಲಯದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಚಿಗುರು ಮೀಸೆ ಯುವಕ ಆತ. ಅಷ್ಟೇ ಅಲ್ಲ ಟೀಂ ಇಂಡಿಯಾದ ಲೇಟೆಸ್ಟ್‌ ಸೆನ್ಸೇಷನ್‌!

Advertisement

 ಇಷ್ಟೆಲ್ಲಾ ಹೇಳಿದ ಮೇಲೆ ಯಾರದು… ಎಂದು ಯೋಚಿಸಬೇಕಾಗಿಲ್ಲ ಅನಿಸುತ್ತೆ. ಹೌದು, ಸದ್ಯಕ್ಕೆ ದೇಶದ ಕ್ರಿಕೆಟ್‌ ಪ್ರಿಯರ ಬಾಯಲ್ಲಿ ಕೇಳಿಬರುತ್ತಿರುವ ಹೆಸರೇ ಪೃಥ್ವಿ ಶಾ. ಕಳೆದ ವರ್ಷವಷ್ಟೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಪೃಥ್ವಿ ಶಾ ದೇಶಿ ಕ್ರಿಕೆಟ್‌ನ ಭರವಸೆಯ ಪ್ರತಿಭೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ತಮಿಳುನಾಡು ವಿರುದ್ಧ ಆಡಿದ ಪ್ರಥಮದರ್ಜೆ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲಿಯೇ ಪೃಥ್ವಿ ಸಿಡಿಸಿದ ಶತಕ ಮುಂಬೈ ತಂಡವನ್ನು ಫೈನಲ್‌ ಪ್ರವೇಶಿಸುವಂತೆ ಮಾಡಿತು. ಅಷ್ಟೇ ಅಲ್ಲ, ಆ ಪಂದ್ಯದಲ್ಲಿ ಪಂದ್ಯಶ್ರೇಷ್ಠರಾಗಿಯೂ ಹೊರಹೊಮ್ಮಿದ್ದು ಪೃಥ್ವಿ ವೃತ್ತಿ ಜೀವನದ ಪ್ರಮುಖ ಘಟ್ಟವಾಗಿ ದಾಖಲಾಯಿತು.

  ”Winning isn’t everything, it’s the only thing” ಎಂಬಂತೆ ಈ ಯಶಸ್ಸು ಅಂತಿಮವಲ್ಲ, ಇದೇ ಸಾಧನೆಯ ಶಿಖರವಲ್ಲ ಎನ್ನುವುದನ್ನು ಬಲವಾಗಿ ನಂಬಿದ ಫ‌ೃಥ್ವಿಗೆ ಮೊನ್ನೆ ಮೊನ್ನೆಯಷ್ಟೇ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲೂ ಆಡುವ ಅವಕಾಶ ಒದಗಿಬಂತು. ಸದುಪಯೋಗ ಪಡಿಸಿಕೊಂಡ ಪ್ರಥ್ವಿ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಶಹಬ್ಟಾಸ್‌ ಎನಿಸಿಕೊಂಡರು. ಈ ಮೂಲಕ ದೇಶದ ಕ್ರಿಕೆಟ್‌ ಪ್ರಿಯರ ಹೃದಯ ಕದಿಯುವಲ್ಲೂ ಯಶಸ್ವಿಯಾಗಿದ್ದಾರೆ ಮಹಾರಾಷ್ಟ್ರದ ಈ ಯುವ ಆಟಗಾರ.

ಪೃಥ್ವಿ ಈ ಎರಡು ಶತಕದಿಂದ ಕ್ರಿಕೆಟಿಗರ ಹಾಗೂ ಕ್ರಿಕೆಟ್‌ ಪ್ರಿಯರ ಮನಸ್ಸಲ್ಲಿ ಗಟ್ಟಿಯಾಗಿ ಬೇರೂರಿದ್ದಾರೆ ಎಂದರೆ ತಪ್ಪಾದೀತು. ಆದರೆ ಈ ಎರಡು ಶತಕ ಸಿಡಿಸಲು ನೆರವಾಗಿದ್ದು ಅವರಲ್ಲಿರುವ ಪ್ರಬಲವಾದ ಆತ್ಮವಿಶ್ವಾಸ ಎನ್ನುವುದು ಗಮನಾರ್ಹ. ಹದಿನೆಂಟನೇ ವಯಸ್ಸಿನಲ್ಲಿ ಅನೇಕ ಮಂದಿ ಭಾರತದ ಪರ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದನ್ನು ದೇಶದ ಕ್ರಿಕೆಟ್‌ ಇತಿಹಾಸ ಕಂಡಿದೆ. ಆದರೆ, ಅವರೆಲ್ಲರಿಗಿಂತಲೂ ಪೃಥ್ವಿ ಬೇರೆಯದೇ ಆದ ಒಂದು ಭರವಸೆ ಮೂಡಿಸಿದ್ದಾರೆ. ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್‌ಗೆ ಮತ್ತೂಬ್ಬ ಸಚಿನ್‌ ತೆಂಡುಲ್ಕರ್‌ ಆಗಿಯೋ ಅಥವಾ ಮತ್ತೂಬ್ಬ ವಿರಾಟ್‌ ಕೊಹ್ಲಿಯಾಗಿಯೋ ಸ್ಥಿರವಾಗಿ ನಿಲ್ಲಬಲ್ಲರೂ ಎನ್ನುವ ಭರವಸೆ ಹುಟ್ಟಿಸಿದ್ದಾರೆ.

ಯಾಕೆ ಭರವಸೆಯ ಬೆಳಕು?
ಹೆಚ್ಚಿನ ವಿವರ ಬೇಕಿಲ್ಲ. ಆದರೆ ಗಮನಿಸಲೇಬೇಕಾದ ಅಂಶ ಏನೆಂದರೆ ಪೃಥ್ವಿ ಆಡಿರುವ ಎರಡು ಟೆಸ್ಟ್‌ ಪಂದ್ಯದಲ್ಲೇ 237 ರನ್‌ಗಳನ್ನು ಸಿಡಿಸಿದ್ದಾರೆ. ಆಡಿರುವ ಮೂರು ಇನಿಂಗ್ಸ್‌ನಲ್ಲಿ ಇಷ್ಟು ರನ್‌ಗಳನ್ನು ಸಂಪಾದಿಸಿದ್ದು, ಇವ್ಯಾವವೂ ಲಾಸ್ಟ್‌ ಓವರ್‌ ಹಿಟಿಂಗ್‌ ರನ್‌ಗಳಲ್ಲ, ಜೆನ್ಯೂನ್‌ ರನ್‌ಗಳಾಗಿವೆ. ಅದರಲ್ಲೂ ಆರಂಭಿಕನಾಗಿ ತಾಳ್ಮೆ ಕಳೆದುಕೊಳ್ಳದೇ ಶತಕ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಎದುರಾಳಿ ಆಟಗಾರರ ಮೊದಲ ಟಾರ್ಗೆಟ್‌ ಆರಂಭಿಕರೇ ಆಗಿರುತ್ತಾರೆ. ಬ್ಯಾಟ್ಸ್‌ಮೆನ್‌ಗಳ ಆತ್ಮವಿಶ್ವಾಸ ಕುಗ್ಗಿಸುವ ಮಾನಸಿಕವಾದ ಸಮರಕ್ಕೂ ಎದುರಾಳಿಗಳು ನಿಂತಿರುವಾಗ ಅದನ್ನು ಗೆಲ್ಲುವುದೇ ಒಂದು ಸವಾಲಾಗಿರುತ್ತದೆ. ಪೃಥ್ವಿ ಇದರಲ್ಲಿ ಗೆದ್ದಿದ್ದಾರೆ. ತಾನೊಬ್ಬ ಬಲಿಷ್ಠ, ಸ್ಥಿರತೆ ಕಾಪಾಡಿಕೊಂಡು ಆಡಬಲ್ಲ ಆರಂಭಿಕ ಎನ್ನುವುದನ್ನೂ ಪೂ›ವ್‌ ಮಾಡಿದ್ದಾರೆ. ಹೀಗಾಗಿಯೇ ಪೃಥ್ವಿ ಭರವಸೆಯ ಬೆಳಕು ಎನ್ನಲೇನಡ್ಡಿಯಿಲ್ಲ.

Advertisement

2013ರ ನಂತರದ ಪ್ರದರ್ಶನ
ಪೃಥ್ವಿಗೆ ಆಗಿನ್ನೂ 14ನೇ ವಯಸ್ಸು. ಹ್ಯಾರಿಸ್‌ ಶೀಲ್ಡ್‌ ಸ್ಕೂಲ್‌ ಕ್ರಿಕೆಟ್‌ನಲ್ಲಿ ಅಚ್ಚರಿಯ ಪ್ರದರ್ಶನ ನೀಡಿದ್ದರು. ಸ್ವತ ಸಚಿನ್‌ ತೆಂಡುಲ್ಕರ್‌ ಅವರೇ ವಾರೆ ವ್ಹಾ ಎಂದು ಹುಬ್ಬೇರಿಸಿ ಬೆನ್ನು ತಟ್ಟಿದ್ದರು. ಕಾರಣ ಪೃಥ್ವಿ 330 ಎಸೆತದಲ್ಲಿ 546 ರನ್‌ ಸಿಡಿಸಿದ್ದರು. ಸ್ಕೂಲ್‌ ಕ್ರಿಕೆಟ್‌ ಇತಿಹಾಸದಲ್ಲೇ ಆಟಗಾರನೊಬ್ಬನ ಇನಿಂಗ್ಸ್‌ ಒಂದರ ಗರಿಷ್ಠ ಸ್ಕೋರ್‌ ಎಂಬ ದಾಖಲೆ ಎಂಬುದು ಪೃಥ್ವಿಗೆ ಗೊತ್ತಾಗಿದ್ದು ಡ್ರೆಸಿಂಗ್‌ ರೂಂಗೆ ಬಂದು ಪ್ಯಾಡ್‌ ಕಳಚಿ ಇಟ್ಟಾಗಲೆ.
ಪೃಥ್ವಿ ಇಷ್ಟಕ್ಕೇ ಸಮಾಧಾನ ಪಡಲಿಲ್ಲ. 2016ರಲ್ಲಿ 19ರ ವಯೋಮಿತಿಯ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡರು. ಶ್ರೀಲಂಕಾ ವಿರುದ್ಧ ಯುವ ಏಷ್ಯಾ ಕಪ್‌ ಗೆದ್ದ ತಂಡದ ಯಶಸ್ಸಿಗೆ ಕಾರಣರಾದವರಲ್ಲಿ ಒಬ್ಬರೆನಿಸಿಕೊಂಡರು. ಬೆನ್ನಿಗೇ ರಣಜಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶವೂ ಒದಗಿಬಂತು. 2017ರಲ್ಲಿ ದುಲೀಪ್‌ ಟ್ರೋಫಿ ಆಡಿದ ಪೃಥ್ವಿ ಹೊಸ ದಾಖಲೆ ನಿರ್ಮಿಸಿದರು. ದುಲೀಪ್‌ ಟ್ರೋಫಿ ಇತಿಹಾಸದಲ್ಲಿ ಅತಿ ಕಿರಿಯ ಆಟಗಾರನಾಗಿ ಶತಕ ಸಿಡಿಸಿ, ಈ ಮೊದಲು ಸಚಿನ್‌ ತೆಂಡುಲ್ಕರ್‌ ಹೆಸರಲ್ಲಿದ್ದ ದಾಖಲೆ ಅಳಿಸಿದರು. ಅದೇ ಗೇಮ್‌ ಟೆಂಪರ್‌ ಮುಂದುವರಿಸಿಕೊಂಡು ಬಂದಿರುವ ಪ್ರಥ್ವಿ ಕ್ರಿಕೆಟ್‌ ಒಳರಾಜಕೀಯಕ್ಕೆ ದಾಳವಾಗಿ ಬಲಿಪಶುವಾಗದೇ ಇದ್ದರೆ ಟೀಂ ಇಂಡಿಯಾಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯಬಲ್ಲ ಪ್ರತಿಭೆ ಆಗಲಿದ್ದಾರೆ. ರಾಜಕೀಯದ ಒಳಹೊಡೆತ ಅವರ ಮೇಲೆ ಬೀಳದಿರಲಿ ಎನ್ನುವುದೇ ಕ್ರಿಕೆಟ್‌ ಪ್ರಿಯರ ಆಶಯ.

ತಾಯಿಗೆ ಸಿಕ್ಕಿಲ್ಲ ಮಗನ ಸಾಧನೆಯ ಖುಷಿ
ಸಾಧಕನ ಹಿಂದೆ ನೋವೊಂದು ಇರುತ್ತದೆ ಎನ್ನುವ ಸಾಮಾನ್ಯ ಮಾತಿದೆ. ಅನೇಕ ಬಾರಿ ಇದು ಸತ್ಯ ಎನಿಸುವುದುಂಟು. ಪೃಥ್ವಿ ಸಾಧನೆಯ ಹಿಂದೆ ಇಂಥದ್ದೊಂದು ನೋವಿದೆ. ನಾಲ್ಕನೇ ವಯಸ್ಸಿನಲ್ಲಿರುವಾಗಲೇ ತಾಯಿಯನ್ನು ಕಳೆದುಕೊಂಡಿರುವ ಪೃಥ್ವಿಗೆ ತಂದೆಯೇ ಸರ್ವಸ್ವ. ಪೃಥ್ವಿ ತಂದೆ ಪಂಕಜ್‌ ಗುಪ್ತಾ ಅವರು (ಬಳಿಕ ಹೆಸರು ಶಾ ಎಂದು ಮಾಡಿಕೊಂಡಿದ್ದಾರಂತೆ) ಬಿಹಾರ್‌ನ ಗಯಾ ಮೂಲದವರು. ಅಲ್ಲಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದು ಬದುಕು ಕಟ್ಟಿಕೊಂಡಿದ್ದಾರೆ.

ಪೃಥ್ವಿ ಯಶಸ್ಸಿನ ಹಾದಿ
– ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ 2018, ಅಕ್ಟೋಬರ್‌ 4-6, ವೆಸ್ಟ್‌ ಇಂಡೀಸ್‌ ವಿರುದ್ಧ
– ಆಡಿರುವ ಟೆಸ್ಟ್‌ ಪಂದ್ಯ 2, ಗಳಿಸಿರುವ ರನ್‌ 237, ಶತಕ 1, ಅರ್ಧಶತಕ 1
– ಪ್ರಥಮದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ 2017, ಜನವರಿ 1-5, ತಮಿಳುನಾಡು ವಿರುದ್ಧ
– ಆಡಿರುವ ಪ್ರಥಮದರ್ಜೆ ಪಂದ್ಯ 16, ಗಳಿಸಿದ ರನ್‌ 1655, ಶತಕ 8, ಅರ್ಧಶತಕ 6

ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next