ರಾಜ್ಯಾದ್ಯಂತ ಕಾರಾಗೃಹಗಳಲ್ಲಿ ಕೈದಿಗಳಿಗೆ ಅಕ್ಷರ ಕಲಿಕೆ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಶಾಲೆಯ ಮೆಟ್ಟಿಲನ್ನೇ ಹತ್ತದೆ ಇರುವವರು, ಅರೆಬರೆ ಅಕ್ಷರ ಜ್ಞಾನ ಇರುವವರು ಸಾಕ್ಷರರಾಗುತ್ತಿದ್ದಾರೆ. ಹೆಬ್ಬೆಟ್ಟು ಹಾಕಿ ಕಾರಾಗೃಹ ಪ್ರವೇಶಿಸಿದವರು ಈಗ ಸಹಿ ಹಾಕುವ ಸಾಮರ್ಥ್ಯ ಪಡೆದಿದ್ದಾರೆ. ಅಲ್ಪಸ್ವಲ್ಪ ಓದಲು ಗೊತ್ತಿದ್ದವರು ಈಗ ಬರೆಯಲು ಆರಂಭಿಸಿದ್ದಾರೆ. ಹೊಸ ಆತ್ಮವಿಶ್ವಾಸ ಬೆಳೆಸಿಕೊಂಡು ಹೊಸ ಜೀವನದ ಕನಸು ಕಾಣುತ್ತಿದ್ದಾರೆ.
Advertisement
ನಾಲ್ಕನೇ ತರಗತಿಗೆ ಸಮಾನ ಜಿಲ್ಲಾ ಕಾರಾಗೃಹಗಳಲ್ಲಿ 4 ತಿಂಗಳುಗಳ ತರಗತಿ ಆರಂಭಿಸಲಾಗಿದ್ದು, ಅಕ್ಷರ ಜ್ಞಾನದೊಂದಿಗೆ ಒಟ್ಟು 24 ಪಾಠಗಳನ್ನು ಹೇಳಿಕೊಡುವ ಯೋಜನೆ ಇದೆ. ಈಗಾಗಲೇ ಹಲವು ಕಾರಾಗೃಹಗಳಲ್ಲಿ ಒಂದು ತಿಂಗಳಲ್ಲಿ 5 ಪಾಠಗಳನ್ನು ಪೂರ್ಣಗೊಳಿಸಲಾಗಿದೆ. ನಾಲ್ಕು ತಿಂಗಳ ತರಗತಿ ಮುಗಿದ ಅನಂತರ ಪರೀಕ್ಷೆ ನಡೆಸಲಾಗುತ್ತದೆ.
“ನಾನು ಶಾಲೆಗೇ ಹೋಗಿಲ್ಲ. ಅ, ಆ, ಇ, ಈ ಇಲ್ಲಿಯೇ ಕಲಿತೆ. ಪಾಠ ಓದುತ್ತೇನೆ. ಆದರೆ ಬರೆಯಲು ಕಷ್ಟವಾಗುತ್ತಿದೆ. ಬರೆಯಲು ಕಲಿಯುವ ಆಸಕ್ತಿ ಇದೆ’ ಎನ್ನುತ್ತಾರೆ ಕೈದಿ ಹಂಝ. “ನನ್ನ ತಮ್ಮ 10ನೇ ತರಗತಿ ಕಲಿತಿದ್ದಾನೆ. ಆದರೆ ನನಗೆ ಅಕ್ಷರ ಪರಿಚಯವೇ ಇರಲಿಲ್ಲ. ಇಲ್ಲಿ ಬರುವಾಗ ಜೈಲಿನವರು ಹೇಳಿದ ದಾಖಲೆಗಳಲ್ಲಿ ಹೆಬ್ಬೆಟ್ಟು ಹಾಕುತ್ತಿದ್ದೆ. ಈಗ ಸಹಿ ಹಾಕುತ್ತೇನೆ’ ಎಂದು ಮಂಗಳೂರಿನ ಕಾರಾಗೃಹದಲ್ಲಿರುವ ಕೈದಿ ಬಾಗಲಕೋಟೆಯ ಗೌಡಪ್ಪ ಗೌಡ ಹೇಳುತ್ತಾರೆ. “ನಾನು ಲಾರಿ ಚಾಲಕನಾಗಿದ್ದೆ. ನನಗೆ ಬಿಲ್, ಊರುಗಳ ಬೋರ್ಡ್ ಓದಲು ಬರುತ್ತಿರಲಿಲ್ಲ. ಈಗ ಸ್ವಲ್ಪ ಓದಲು ಬರುತ್ತಿದೆ. ಅಕ್ಷರ ಕಲಿತ ಮೇಲೆ ಜೀವನದಲ್ಲಿ ತುಂಬಾ ಬದಲಾಗಬೇಕು ಎಂಬ ಆಸೆ ಹೆಚ್ಚಾಗಿದೆ. ಆತ್ಮವಿಶ್ವಾಸವೂ ಮೂಡಿದೆ’ ಎನ್ನುತ್ತಾರೆ ಇನ್ನೋರ್ವ ಕೈದಿ ರಂಗಪ್ಪ.
Related Articles
“ಕೈದಿಗಳಿಗೆ ಪಾಠ ಹೇಳಿಕೊಡುವುದು ಸವಾಲು. ಇಲ್ಲಿನ ಕೈದಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಆಸಕ್ತಿಯಿಂದ ಕಲಿಯುತ್ತಿದ್ದಾರೆ. ದಿನಕ್ಕೆ 2 ತಾಸು ಪಾಠ ಹೇಳಿಕೊಡುತ್ತಿದ್ದೇನೆ. ಇದರಲ್ಲಿ ವ್ಯಂಜನ, ಸ್ವರಾಕ್ಷರಗಳು, ಗಣಿತ ಪಾಠವೂ ಸೇರಿದೆ. 4ನೇ ಪಾಠ ಮುಗಿದ ಅನಂತರ ಒಂದು ಪರೀಕ್ಷೆ ನಡೆಸುತ್ತೇವೆ. ಎಲ್ಲ ಪಾಠ ಮುಗಿದ ಮೇಲೆ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡುತ್ತೇವೆ’ ಎನ್ನುತ್ತಾರೆ ಶಿಕ್ಷಕ ಸುಬ್ರಹ್ಮಣ್ಯ.
Advertisement
ದ.ಕ, ಉಡುಪಿ: 35 ಮಂದಿಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ 14 ಮಂದಿ ಅಕ್ಷರಾಭ್ಯಾಸ ಮಾಡು ತ್ತಿದ್ದು ಇದರಲ್ಲಿ 60 ವರ್ಷ ಮೇಲ್ಪಟ್ಟ ಇಬ್ಬರು ಕೈದಿ ಗಳಿದ್ದಾರೆ. ಓರ್ವರು ಮಹಿಳಾ ಕೈದಿ ಇದ್ದಾರೆ. ಉಡುಪಿಯ ಕಾರಾಗೃಹದಲ್ಲಿ ಆರಂಭ ದಲ್ಲಿ 26 ಮಂದಿ ಕೈದಿಗಳು ತರಗತಿ ಯಲ್ಲಿದ್ದರು. ಅವರಲ್ಲಿ 5 ಮಂದಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 21 ಮಂದಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ನಾನು ಬಿ.ಎಡ್ ಮುಗಿಸಿದ್ದೇನೆ. ನಮ್ಮ ಕಾರಾಗೃಹದಲ್ಲಿ ಟಿಸಿಎಚ್, ಡಿಎಡ್ ಮಾಡಿರುವ ಕೆಲವು ಸಿಬಂದಿ ಇದ್ದು, ನಾನು ಮತ್ತು ಅವರು ತರಗತಿ ನಡೆಸುತ್ತೇವೆ. ಮುಂದೆ ಪ್ರತ್ಯೇಕವಾಗಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕೈದಿಗಳು ಆಸಕ್ತಿಯಿಂದ ತರಗತಿಗಳಲ್ಲಿ ಪಾಲ್ಗೊಳ್ಳುತ್ತ ಕಲಿಯುತ್ತಿದ್ದಾರೆ.
-ಶ್ರೀನಿವಾಸ್, ಅಧೀಕ್ಷಕರು, ಉಡುಪಿ ಜಿಲ್ಲಾ ಕಾರಾಗೃಹ ಸರಕಾರವು ಕಾರಾಗೃಹ, ಕೈದಿಗಳ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಈಗ ನಡೆಯುತ್ತಿರುವ “ಕಲಿಕೆಯಿಂದ ಬದಲಾವಣೆ’ ಕಾರ್ಯಕ್ರಮ ಕೈದಿಗಳು ಜೀವನದಲ್ಲಿ ಶಾಶ್ವತವಾಗಿ ಸುಧಾರಣೆಗೊಂಡು ಹೊಸ ಬದುಕು ಕಟ್ಟಿಕೊಳ್ಳಲು ಪೂರಕವಾಗಲಿದೆ.
-ಚಂದನ್ ಜೆ. ಪಟೇಲ್,
ಅಧೀಕ್ಷಕರು, ಮಂಗಳೂರು ಜಿಲ್ಲಾ ಕಾರಾಗೃಹ -ಸಂತೋಷ್ ಬೊಳ್ಳೆಟ್ಟು