ಬೆಂಗಳೂರು: ನಕಲಿ ಜ್ಯೋತಿಷಿಯ ಸಲಹೆ ಮೇರೆಗೆ, ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿ ಮಾರಾಟ ಮಾಡಿದ 5 ಆರೋಪಿ ಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಕೆ.ಎಸ್.ಗಾರ್ಡ್‌ನ್ ನಿವಾಸಿ ದಾಮೋದರ್ (42), ಈತನ ಭಾಮೈದ ಹಾಗೂ ಗುಟ್ಟೇಪಾಳ್ಯದ ರಾಮ್‌ದಾಸ್ (38), ಸಹದ್ಯೋಗಿ, ಕಂಪೆನಿಯ ವಾಹನ ಚಾಲಕ ಜಯನಗರ ನಿವಾಸಿ ಸರವಣ (40), ಸೀನು (34) ಹಾಗೂ ನಕಲಿ ಜ್ಯೋತಿಷಿ ಕೃಷ್ಣರಾಜು (58) ಬಂಧಿತರು. ಮತ್ತೂಬ್ಬ ಆರೋಪಿ ರಾಜೇಂದ್ರನಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಮೂಲಕ 49.93 ಲಕ್ಷ ರೂ. ಮೌಲ್ಯದ 671 ಮಾನಿಟರ್ ಮತ್ತು 10.49 ಲಕ್ಷ ನಗದು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೊಸೂರು ಮುಖ್ಯರಸ್ತೆಯಲ್ಲಿರುವ ಸೂಪರ್ ಟ್ರಾನ್ ಎಲೆಕ್ಟ್ರಾನಿಕ್ಸ್ ಪ್ರ„ವಟ್ ಲಿಮಿಟೆಡ್‌ನಲ್ಲಿ ಕಳೆದ ಏಳು ವರ್ಷಗಳಿಂದ ಇಲ್ಲಿನ ಸ್ಟೋರ್ ಉಸ್ತು ವಾರಿಯಾಗಿ ಕೆಲಸ ಮಾಡುವ ದಾಮೋದರ್, ತನ್ನ ಕಷ್ಟಗಳ ಪರಿಹಾರಕ್ಕಾಗಿ ನಕಲಿ ಜ್ಯೋತಿಷಿ ಕೃಷ್ಣರಾಜ್ ಬಳಿ ಹೋಗಿದ್ದಾನೆ. ಈತ ಬಹುಬೇಗ ಹಣ ಮಾಡ ಬೇಕಾದರೆ ಕಳ್ಳತನ ಮಾಡು, ಅದು ಯಾರಿಗೂ ತಿಳಿಯುವುದಿಲ್ಲ. ಬಂದ ಹಣದಲ್ಲಿ ನನಗೂ ಸ್ವಲ್ಪ ಕೊಡು ಎಂದು ಭವಿಷ್ಯವಾಣಿ ನುಡಿಯುತ್ತಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ದಾಮೋದರ್ ಸಹದ್ಯೋಗಿ ಮತ್ತು ಸಂಬಂಧಿ ಜತೆ ಸೇರಿ ಕೃತ್ಯವೆಸಗಿ ದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.
ಜ್ಯೋತಿಷಿ ಮಾತು ಕೇಳಿ ಕೆಟ್ಟ: ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ದಾಮೋದರ್ ಸ್ಥಳೀಯರೊಬ್ಬರ ಸಲಹೆ ಮೇರೆಗೆ ಆಗಾಗ ಮಲ್ಲಿಗೆ ಆಸ್ಪತ್ರೆ ಬಳಿ ಇರುವ ಅಶ್ವತ್ಥ ಕಟ್ಟೆಯ ಬಳಿ ಜ್ಯೋತಿಷಿ ಹೇಳುತ್ತಿದ್ದ ಕೃಷ್ಣರಾಜ್ ಬಳಿ ಹೋಗಿದ್ದು, ತನ್ನ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ. ಈತನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ ಕೃಷ್ಣರಾಜು, ತನ್ನ ಬಳಿ ಬರುತ್ತಿದ್ದ ರಾಜೇಂದ್ರ ಎಂಬಾತನನ್ನು ದಾಮೋದರ್ ಗೆ ಪರಿಚಯಿಸಿಕೊಂಡಿದ್ದಾನೆ. ಆಗ ಜ್ಯೋತಿಷಿ ಕೃಷ್ಣರಾಜು, “ಸದ್ಯ ಆಷಾಡ ಮಾಸ ಇದ್ದು, ಇದು ಕಳೆದ ಬಳಿಕ ಶ್ರಾವಣದಲ್ಲಿ ಒಳ್ಳೆ ಭವಿಷ್ಯವಿದೆ. ನಾನು ಹೇಳಿದ್ದಂತೆ ಕೇಳಿದರೆ ನಿನ್ನ ಕಷ್ಟಗಳನ್ನು ಪರಿಹಾರ ಮಾಡುತ್ತೇನೆ ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಂಬಿದ ದಾಮೋದರ್ ಆಗಸ್ಟ್‌ನಲ್ಲಿ ಮತ್ತೆ ಜ್ಯೋತಿಷಿ ಬಳಿ ಹೋಗಿದ್ದಾನೆ.
ಎಸ್.ಪಿ.ರಸ್ತೆಯಲ್ಲಿ ಮಾರಾಟ: ನಕಲಿ ಜ್ಯೋತಿಷಿ ಕೃಷ್ಣರಾಜು, ದಾಮೋದರ್ ಮತ್ತು ರಾಜೇಂದ್ರ ಮೂರು ಸೇರಿ ತಮಗೆ ಪರಿಚಯವಿದ್ದ ಕಂಪ್ಯೂಟರ್ ಮತತು ಮಾನಿಟರ್‌ಗಳನ್ನು ಮಾರಾಟ ಮಾಡುವ ಅರವಿಂದ್ ಎಂಬಾತನನ್ನು ಸಂಪರ್ಕಿಸಿದ್ದಾರೆ.
ನಂತರ ಈತನ ಮೂಲಕ ಎಸ್.ಪಿ.ರಸ್ತೆಯಲ್ಲಿ ವಿವಿಧ ಕಂಪ್ಯೂಟರ್ ಮಾರಾಟಗಾರರಿಗೆ ಮಾನಿಟರ್‌ಗಳನ್ನು ಮಾರಾಟ ಮಾಡಿದ್ದಾರೆ. ಆರೋಪಿಗಳ ಬಂಧನದ ಬಳಿಕ 12 ಮಂದಿ ಕಂಪ್ಯೂಟರ್ ಮಾರಾಟಗಾರರಿಂದ 671 ಮಾನಿಟರ್‌ಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ನಿಂಬೆಹಣ್ಣು ಕೊಟ್ಟಕಳ್ಳ ಸ್ವಾಮೀಜಿ ಈ ನಡುವೆ ರಾಜೇಂದ್ರ ಮತ್ತು ಕೃಷ್ಣರಾಜು ಇಬ್ಬರು ಸೇರಿ ದಾಮೋದರ್‌ಗೆ ನಿನ್ನ ಕಂಪೆನಿಗೆ ಬರುವ ಮಾನಿಟರ್‌ಗಳನ್ನು ಕಳವು ಮಾಡಿ ಮಾರಿದರೆ ಹಣಗಳಿಸಬಹುದು ಎಂದು ಎರಡು ನಿಂಬೆಹಣ್ಣು ಮಂತ್ರಿಸಿ ಕೊಟ್ಟಿದ್ದಾನೆ. ಬಳಿಕ ತನ್ನ ಭಾಮೈದ ಹಾಗೂ ಇತರೆ ಸಹದ್ಯೋಗಿಗಳಿಗೆ ಜ್ಯೋತಿಷಿಯಿಂದ ಮತ್ತೂಮ್ಮೆ ಭವಿಷ್ಯ ಹೇಳಿಸಿದ್ದಾನೆ.
ಅದರಂತೆ ಎಲ್ಲ ಆರೋಪಿಗಳು ಆ.3 ಮತ್ತು 11 ರಂದು ತಮಿಳುನಾಡಿನಿಂದ ಬಂದ ಒಂದು ಸಾವಿರ ಮಾನಿಟರ್‌ಗಳನ್ನು ದಾಮೋದರ್ ಸೂಚನೆಯಂತೆ ವಾಹನ ಚಾಲಕ ಶರವಣ ರಾಜೇಂದ್ರನ ಮನೆಗೆ ಕಳುಹಿಸಿದನು. ಬಳಿಕ ದಾಮೋದರ್ ಸೂಪರ್ ಟ್ರಾನ್ಸ್ ಎಲೆಕ್ಟ್ರಾನಿಕ್ ಕಂಪೆನಿಗಳಿಗೆ 1000 ಮಾನಿಟರ್‌ಗಳು ಬಂದಿವೆ ಎಂದು ವೋಚರ್‌ಗೆ ಸಹಿ ಮಾಡಿ ಬ್ಲೂ ಡಾಟ್ ವೇರ್ ಹೌಸ್‌ಗೆ ವೋಚರ್ ಅನ್ನು ಕಳುಹಿಸಿಕೊಟ್ಟಿದ್ದ ಎಂದು ಅವರು ತಿಳಿಸಿದರು.