ಪಡುಬಿದ್ರಿ: ಯಾವುದೇ ದೇಶವು ಅಭಿವೃದ್ಧಿಯಲ್ಲಿ ವೇಗವನ್ನು ಪಡೆಯಬೇಕಾದರೆ ಸ್ವತ್ಛತೆಗೆ ಪ್ರಥಮ ಆದ್ಯತೆ ನೀಡಬೇಕು. ಅಭಿವೃದ್ಧಿ ಹೊಂದಿದ ದೇಶಗಳನ್ನು ಗಮನಿಸಿದರೆ ಇದರ ಬಗ್ಗೆ ತಿಳಿಯಬಹುದು. ಭಾರತವೂ ಅಭಿವೃದ್ಧಿ ಪಥದತ್ತ ದಿಟ್ಟ ಹೆಜ್ಜೆ ಹಾಕಲು ಮನೆಯಿಂದಲೇ ಸ್ವತ್ಛತಾ ಅಭಿಯಾನ ಪ್ರಾರಂಭವಾಗಬೇಕು ಎಂದು ಮೂಲ್ಕಿ ವಿಜಯಾ ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ | ವಾಮನ ಬಾಳಿಗಾ ಹೇಳಿದರು.
ಅವರು ಫೆ. 10ರಂದು ಹೆಜಮಾಡಿ ಗ್ರಾ. ಪಂ., ಮಂಗಳೂರು ರಾಮಕೃಷ್ಣ ಮಿಶನ್, ಹೆಜಮಾಡಿಕೋಡಿ ಗಾಂಧಿನಗರ ಯುವಕ ವೃಂದ, ಮೂಲ್ಕಿ ವಿಜಯಾ ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ರೆಡ್ ಕ್ರಾಸ್ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸ್ವತ್ಛತೆಗಾಗಿ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
200ಕ್ಕೂ ಅಧಿಕ ಸ್ವಯಂಸೇವಕರು ಹೆಜಮಾಡಿ ಬಸ್ಸು ನಿಲ್ದಾಣದಿಂದ ಹೆಜಮಾಡಿಕೋಡಿ ಗಾಂಧಿನಗರವರೆಗಿನ ಸುಮಾರು 2 ಕಿ. ಮೀ. ಉದ್ದದ ಮೀನುಗಾರಿಕಾ ರಸ್ತೆ ಬದಿ ಸ್ವತ್ಛತಾ ಅಭಿಯಾನ ನಡೆಸಿದರು.
ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾ ಯತ್ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್, ಉಪಾಧ್ಯಕ್ಷ ಸುಧಾಕರ ಎಸ್. ಕರ್ಕೇರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ವೈ. ಶೆಟ್ಟಿ, ಸದಸ್ಯರಾದ ಪ್ರಾಣೇಶ್ ಹೆಜ್ಮಾಡಿ, ಶಿವರಾಮ ಶೆಟ್ಟಿ, ಗೋವರ್ಧನ ಕೋಟ್ಯಾನ್, ರೇಷ್ಮಾ ಮೆಂಡನ್, ಅಬ್ದುಲ್ ರೆಹಮಾನ್ ಪುತ್ತು, ಗಾಂಧಿನಗರ ಯುವಕ ವೃಂದದ ಅಧ್ಯಕ್ಷ ರವೀಂದ್ರ ಕೋಟ್ಯಾನ್, ಕಾರ್ಯದರ್ಶಿ ರಾಮಕೃಷ್ಣ ಸುವರ್ಣ, ಸದಸ್ಯ ಜಯಕರ ಹೆಜ್ಮಾಡಿ, ವಿಜಯಾ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಪ್ರೊ| ವೆಂಕಟೇಶ್ ಭಟ್, ರೆಡ್ ಕ್ರಾಸ್ ಸೊಸೈಟಿಯ ಪ್ರೊ | ನಾಗರಾಜ ರಾವ್, ಹೆಜಮಾಡಿ ಕರಾವಳಿ ಯುವಕ ವೃಂದದ ಶರಣ್‌ಕುಮಾರ್ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.